ರಾಯಚೂರು: ಕಳೆದ ಗುರುವಾರ ಮಧ್ಯಾಹ್ನ ಲಿಂಗಸುಗೂರು ತಾಲೂಕಿನ ಗುಂಡಲಬಂಡ ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಕೃಷ್ಣಪ್ಪ ನಾಯಕ, ಧನುಷ್, ಮಹಾಂತೇಶ ಹಾಗೂ ಸಿದ್ದಪ್ಪ ಎಂಬುವವರ ಪೈಕಿ ಕೃಷ್ಣಪ್ಪ ಹಾಗೂ ಅವರ ಮಗ ಧನುಷ್ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ಸಿದ್ದಪ್ಪ ಈಜಿ ದಡ ಸೇರಿದ್ದರು.
ಇನ್ನು ಪ್ರವಾಹದ ಮಧ್ಯೆ ಸಿಲುಕಿದ್ದ ಯುವಕ ಮಹಾಂತೇಶನ ರಕ್ಷಣೆಗೆ ಪೊಲೀಸ್ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಚರ್ಚೆ ನಡೆಸುತ್ತಿದ್ದಾಗ, ಯುವಕನ ಅವಸ್ಥೆ ನೋಡಲಾಗದೆ ಹನುಮಂತ ಗೋಲಪಲ್ಲಿ ಎಂಬುವವರು ನೀರಿಗೆ ಧುಮುಕಿ ಆತನ ಪ್ರಾಣ ಕಾಪಾಡಿದ್ದರು. ಈ ಕುರಿತು ಅವರು 'ಈಟಿವಿ ಭಾರತ'ದ ಜೊತೆ ಅನುಭವ ಹಂಚಿಕೊಂಡಿದ್ದಾರೆ.
ಇದನ್ನು ಓದಿ: ರಾಯಚೂರು: ಜಲಪಾತ ವೀಕ್ಷಣೆಗೆ ತೆರಳಿದ್ದ ತಂದೆ-ಮಗ ನೀರುಪಾಲು
ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನಿಗೆ, ಈಜು ರಕ್ಷಣಾ ಕವಚ ಹಾಗೂ ಸೊಂಟಕ್ಕೆ ಹಗ್ಗ ಬಿಗಿದು ಧೈರ್ಯದ ಮಾತು ಹೇಳುತ್ತ ದಡ ಸೇರಿದಾಗ ಕಣ್ಣಂಚಲ್ಲಿ ನೀರು ತುಂಬಿಕೊಂಡಿದ್ದವು ಎಂದು ಅವರು ಭಾವುಕರಾದರು.
ಇದನ್ನು ಓದಿ: ರಾಯಚೂರು: ಜಲಪಾತದಲ್ಲಿ ಕೊಚ್ಚಿ ಹೋಗಿದ್ದ ತಂದೆ-ಮಗನ ಮೃತದೇಹ ಪತ್ತೆ
ಭಯಾನಕ ಪ್ರವಾಹದಲ್ಲಿ ಹೇಗೆ ಹೋಗಿ ಬಂದೆನೋ ತಿಳಿಯಲಿಲ್ಲ. ಬಾಲಕನ ರಕ್ಷಣೆಯೊಂದೇ ಗುರಿ ಆಗಿತ್ತು. ಒಬ್ಬ ಸಹೋದರನನ್ನು ರಕ್ಷಿಸಿದ ಧನ್ಯತಾಭಾವ ನನ್ನದಾಗಿತ್ತು. ಪೊಲೀಸ್ ಅಧಿಕಾರಿಗಳು, ಸ್ಥಳೀಯರ ಶುಭ ಹಾರೈಕೆ ನನಗೂ ಖುಷಿ ತಂದಿದೆ ಎಂದು ಹನುಮಂತ ಗೋಲಪಲ್ಲಿ ಅನುಭವ ಹಂಚಿಕೊಂಡರು.