ರಾಯಚೂರು: ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಯಥಾವತ್ತಾಗಿ ಜಾರಿ ಮಾಡಬೇಕೆಂದು ವಟಗಲ್ ಬಸವೇಶ್ವರ ಏತ ನೀರಾವರಿ ಹೋರಾಟ ಸಮಿತಿಯ ಸದಸ್ಯರು ಆಗ್ರಹಿಸಿದ್ದಾರೆ.
ಮಸ್ಕಿ ತಾಲೂಕಿನ ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆಗೆ ಸರ್ಕಾರ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಸಿದ್ದು, ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಪಾಮನಕಲ್ಲೂರು, ಅಮಿನಗಡ, ಅಂಕುಶದೊಡ್ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ 24 ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಎನ್ಆರ್ಬಿಸಿ 5 ಎ ಹೋರಾಟ ಸಮಿತಿಯವರು, ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ರದ್ದುಪಡಿಸಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಯೋಜನೆಯನ್ನು ರದ್ದುಪಡಿಸಬಾರದು. ಏತ ನೀರಾವರಿ ಮೂಲಕ ಹನಿ ನೀರಾವರಿ ರೈತರಿಗೆ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದರು.
ಓದಿ : ಧಾರವಾಡ: ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಎಸ್ಯುಸಿಐ ಪ್ರತಿಭಟನೆ
ಎನ್ಆರ್ಬಿಸಿ 5 ಎ ಕಾಲುವೆ ಜಾರಿಗೆ ಮುನ್ನ ಕಳೆದ 14ರಿಂದ 15 ವರ್ಷ ನಂದವಾಡಗಿ (ಈಗಿನ ವಟಗಲ್ ಬಸವೇಶ್ವರ) ಏತ ನೀರಾವರಿಗಾಗಿ ಒತ್ತಾಯಿಸಿ ಹೋರಾಟ ನಡೆಸಲಾಗಿತ್ತು. ಆದ್ರೆ ಆಗ ಅದು ಸಫಲವಾಗಿರಲಿಲ್ಲ. ಈಗ ಸರ್ಕಾರ ಯೋಜನೆ ಜಾರಿಗೆ ಡಿಪಿಆರ್ ಮಾಡಿ ಟೆಂಡರ್ ಕರೆಯುವುದಕ್ಕೆ ಮುಂದಾಗಿದೆ. ಎನ್ಆರ್ಬಿಸಿ 5 ಎ ಕಾಲುವೆಗಾಗಿ ಆಗ್ರಹಿಸಿ ಕಳೆದ 77 ದಿನಗಳಿಂದ ರೈತರು ನಿರಂತರವಾಗಿ ಧರಣಿ ನಡೆಸುತ್ತಿದ್ದು, ದಿನೇ ದಿನೆ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ.
ಆದರೆ ಮುಂಬರುವ ದಿನಗಳಲ್ಲಿ ಮಸ್ಕಿ ಉಪ ಚುನಾವಣೆ ಎದುರಾಗುವುದರಿಂದ ಚುನಾವಣೆಗೆ ತೊಂದರೆಯಾಗಬಹುದೆಂಬ ನಿಟ್ಟಿನಲ್ಲಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೋರಾಟದ ಹಾದಿ ತಪ್ಪಿಸಲು ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ಜಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ವಿರೋಧಿಸಿರುವ ಕೆಲ ರೈತರು, ಹನಿ ನೀರಾವರಿ ರದ್ದುಪಡಿಸಿ, ಬದಲಾಗಿ ಹರಿ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಎರಡು ಕಡೆಯ ರೈತರ ನಡುವೆ ನೀರಿನ ರಾಜಕೀಯ ಪ್ರಾರಂಭವಾಗಿದೆ.