ರಾಯಚೂರು: ಲಿಂಗಸುಗೂರು ತಾಲೂಕಿನ ಗುಂತಗೋಳ ಗ್ರಾಮದ ಪರಿಶಿಷ್ಟ ಜನಾಂಗದವರಿಗೆ ಭೂಮಿ ಸಾಗುವಳಿ ಮಾಡಲು ಅವಕಾಶ ನೀಡಿ ಎಂದು ಆಗ್ರಹಿಸಿ ರೈತರು ಉಪವಾಸ ಸತ್ಯಾಗ್ರಹ ನಡೆಸಿದರು.
ಮಂಗಳವಾರ ಕರ್ನಾಟಕ ರೈತ ಸಂಘ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ರೈತರು, ಗುಂತಗೋಳ 500 ಎಕರೆ ಅರಣ್ಯ ಭೂಮಿಯಲ್ಲಿ 40 ಕ್ಕೂ ಹೆಚ್ಚು ರೈತರು ಅಕ್ರಮ ಸಾಗುವಳಿ ನಡೆಸಿದ್ದಾರೆ. ಆದರೆ, ಅರಣ್ಯ ಅಧಿಕಾರಿಗಳು ಕೇವಲ ಆರು ಕುಟುಂಬಸ್ಥರಿಗೆ ಮಾತ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಹುತೇಕರು 10 ಎಕರೆಗೂ ಹೆಚ್ಚು ಉಳಿಮೆ ಮಾಡುತ್ತಿದ್ದಾರೆ. ಅಂಥವರನ್ನು ಬಿಟ್ಟು ಕೇವಲ 2 ರಿಂದ 3 ಎಕರೆ ಉಳಿಮೆ ಮಾಡುವ ಪರಿಶಿಷ್ಟರ ಒಕ್ಕಲೆಬ್ಬಿಸುವ ಕೃತ್ಯ ನಿರಂತರವಾಗಿ ನಡೆಯುತ್ತಿದೆ. ಈಗಾಗಲೆ ಪ್ರಕರಣ ದಾಖಲಿಸಿ ಅನಗತ್ಯ ಹಿಂಸೆ ನೀಡಲಾಗುತ್ತಿದೆ. ಹೈಕೋರ್ಟ್ ಆದೇಶದಂತೆ ಸಾಗುವಳಿ ಮಾಡಲು ರೈತರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.