ರಾಯಚೂರು: ಅಂಬೇಡ್ಕರ್ ಅಭಿವೃದ್ದಿ ನಿಗಮ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಕೃಷಿ ಚಟುವಟಿಕೆಗೆ ಯೋಗ್ಯವಿಲ್ಲದ ಭೂಮಿಯನ್ನು ನೀಡುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ಅಭಿವೃದ್ದಿ ನಿಗಮದ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ರೈತರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದ ಜನರಿಗೆ ಕೃಷಿ ಮಾಡಿ ಜೀವನ ಸಾಗಿಸಲು ಭೂ ಒಡೆತನ ಯೋಜನೆಯಡಿ ಭೂಮಿು ಮಂಜೂರಾಗಿತ್ತು.
ಈ ಯೋಜನೆಯಡಿ ಫಲಾನುಭವಿಗಳಿಗೆ ಮಾನವಿ ತಾಲೂಕಿನ ಮಲ್ಲಿಗೆಮಡ್ಗು ಗ್ರಾಮದ ಸರ್ವೇ ನಂ. 28ರ ಫಲಾವತ್ತಾದ ಭೂಮಿಯನ್ನು ನೀಡುವುದಾಗಿ ತೋರಿಸಿದ್ದಾರೆ. ಆದರೆ, ಬಳಿಕ ಫಲಾನುಭವಿಗೆ ಭೂಮಿಯನ್ನು ಹಂಚಿಕೆ ಮಾಡುವಾಗ ಸಂಗಾಪುರ ಗ್ರಾಮದಲ್ಲಿ ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಸಬ್ ರಿಜಿಸ್ಟ್ರಾರ್ ಆಫೀಸ್‌ನಲ್ಲಿ ರಿಜಿಸ್ಟರ್ ಮಾಡಿಸುವ ಮೂಲಕ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆಂದು ರೈತರು ಆರೋಪಿಸಿದರು.
ಕೂಡಲೇ ಸರ್ಕಾರ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳುವ ಮೂಲಕ ಫಲಾನುಭವಿಗಳಿಗಾದ ಅನ್ಯಾಯ ಸರಿಪಡಿಸಬೇಕು. ಉಳುಮೆಗೆ ಯೋಗ್ಯವಾದ ಭೂಮಿ ಹಂಚಿಕೆ ಮಾಡುವಂತೆ ಆಗ್ರಹಿಸಿದರು.