ರಾಯಚೂರು: ಇಷ್ಟು ದಿನ ಆನ್ಲೈನ್ ಮೋಸ, ಎಟಿಎಂನಲ್ಲಿ ಮೋಸ ಮಾಡುತ್ತಿದ್ದ ವಂಚಕರು ಹೊಸ ದಾರಿ ಹುಡುಕಿದ್ದಾರೆ. ಎಸಿಬಿ ಅಧಿಕಾರಿಗಳು ಎಂದು ಹೇಳಿ, ಕೆಳಹಂತದ ಅಧಿಕಾರಿಗಳು ಭ್ರಷ್ಟರು, ಅವರ ಮೇಲೆ ದೂರು ಬಂದಿವೆ ಎಂದು ಮೇಲಾಧಿಕಾರಿಗಳಿಗೆ ತಿಳಿಸಿ ನಂತರ ಕೆಳ ಹಂತದ ಅಧಿಕಾರಿಗಳಿಗೆ ನೇರವಾಗಿ ಫೋನ್ ಮಾಡಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಒಪ್ಪದಿದ್ದರೆ ಕೇಸ್ ಜಡಿಯುವುದಾಗಿ ಬೆದರಿಕೆ ಹಾಕುವ ಗ್ಯಾಂಗ್ ಹುಟ್ಟಿಕೊಂಡಿದೆ.
ಕರ್ನಾಟಕದಲ್ಲಿ ಅಧಿಕಾರಿಗಳನ್ನು ಬೆದರಿಕೆ ಹಾಕಿ ಮೋಸ ಮಾಡುವಂತಹ ಘಟನೆಗಳು ಕೇಳಿಬರುತ್ತಿವೆ. ಭ್ರಷ್ಟಾಚಾರ ನಡೆಸುವ ಕೆಲ ಅಧಿಕಾರಿಗಳು ಬೆದರಿಕೆ ಹಣ ನೀಡಿದರೆ, ಇನ್ನೂ ಕೆಲವರು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ರಾಯಚೂರು ಜಿಲ್ಲೆಯ ಜಿಲ್ಲಾ ಪಂಚಾಯತ್ ಸಿಇಒ ನೂರ್ ಜಹಾರ್ ಖಾನಂಗೆ ಕರೆ ಮಾಡಿ ನಿಮ್ಮ ಅಧೀನದ ಜಿ. ಪಂ ಯೋಜನಾಧಿಕಾರಿ ರೋಹಿಣಿ ಹಾಗೂ ರಾಯಚೂರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ವಿರುದ್ಧ ದೂರು ಬಂದಿದೆ ಅಂತ ನಕಲಿ ಗ್ಯಾಂಗ್ ದೂರವಾಣಿ ಕರೆ ಮಾಡಿದ್ದಾರೆ.
ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ನಾಯಕ್‌ಗೆ ಕರೆ ಮಾಡಿ ರಾಯಚೂರು ವಲಯದ ಅಬಕಾರಿ ನಿರೀಕ್ಷಕ ಹಣಮಂತ ಗುತ್ತೇದಾರ ವಿರುದ್ಧ ಎಸಿಬಿಗೆ ದೂರು ಬಂದಿದೆ. ಅವರನ್ನ ವಿಚಾರಣೆ ಮಾಡಬೇಕು. ನನ್ನ ನಂಬರ್ಗೆ ಕರೆ ಮಾಡಲು ಹೇಳಿ ಅಂತ ತಿಳಿಸಿದ್ದಾರೆ. ಬಳಿಕ ನೇರವಾಗಿ ಅಧಿಕಾರಿಗಳಿಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗ್ತಿದೆ.
ಅಲ್ಲದೇ, ನಕಲಿ ಅಧಿಕಾರಿಗಳು ನಿಮಗೆ ಅನುಕೂಲ ಮಾಡಿಕೊಡಲು ಕರೆ ಮಾಡಿದ್ದೇವೆ. ನೀವು ಹಣವನ್ನು ಫೋನ್ ಪೇ, ಇಲ್ಲವೇ ಗೂಗಲ್ ಪೇ ಮಾಡಿ. ಇಲ್ಲದಿದ್ದರೆ ಈಗಾಗಲೇ ಮೇಲಾಧಿಕಾರಿಗಳಿಂದ ನಿಮ್ಮ ಮನೆ ಮತ್ತು ಆಫೀಸ್ ಮೇಲೆ ದಾಳಿ ಮಾಡಲು ಕಚೇರಿಗೆ ಆದೇಶ ಬಂದಿದೆ. ನಾವು ಕೇಳಿದ ಹಣವನ್ನು ನೀವು ನೀಡದೇ ಹೋದರೆ ಯಾವಾಗ ಬೇಕಾದರೂ ನಾವು ದಾಳಿ ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ಇದರಿಂದ ಅನುಮಾನಗೊಂಡ ರಾಯಚೂರು ಜಿಲ್ಲೆಯ ಅಧಿಕಾರಿಗಳು, ಜಿಲ್ಲಾ ಪೊಲೀಸ್, ಸೈಬರ್ ಕ್ರೈಂಗೆ ದೂರು ಸಲ್ಲಿಸಿದ್ದಾರೆ. ಇದೀಗ ಇದರ ತನಿಖೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದ್ದಾರೆ.
ಓದಿ: ಸಿಎಂ ಬೊಮ್ಮಾಯಿ ಆರ್ಎಸ್ಎಸ್ನವರಲ್ಲ, ಅವರನ್ನು ಬದಲಾಯಿಸ್ತಾರೆ: ಸಿದ್ದರಾಮಯ್ಯ