ರಾಯಚೂರು: ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ಸಂತ್ರಸ್ತರಿಗೆ ತಕ್ಷಣವೇ ನೀಡಬೇಕಾದ ಪರಿಹಾರವನ್ನ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಿಡುಗಡೆ ಮಾಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಸಂತ್ರಸ್ತರಿಗೆ ತುರ್ತು ಪರಿಹಾರವಾಗಿ ಒಬ್ಬ ಸಂತ್ರಸ್ತರಿಗೆ 5 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಆದರೆ, ರಾಯಚೂರು ಜಿಲ್ಲೆಯ ಕಳೆದ ಸುಮಾರು 8 ತಿಂಗಳಿನಿಂದ 22 ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ವಿಳಂಬವಾಗಿತ್ತು. ಈ ಬಗ್ಗೆ ಈಟಿವಿ ಭಾರತ್ "ನಾಚಿಕೆಗೇಡು,, ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತರಿಗೆ ಪರಿಹಾರ ನೀಡಲೂ ದುಡ್ಡಿಲ್ವಂತೆ!!" ಎನ್ನುವ ಶೀರ್ಷಿಕೆ ಅಡಿಯಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಮಹಿಳಾ ಮತ್ತು ಕಲ್ಯಾಣ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಒಂದು ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿದೆ.
ಕಳೆದ ಎಂಟು ತಿಂಗಳಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತರ ಪ್ರಕರಣ ಸಂತ್ರಸ್ತರಿಗೆ ತಕ್ಷಣ ನೀಡುವ ಪರಿಹಾರ ಹಣ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತಿತ್ತು. ಪ್ರಸ್ತಾವನೆ ಆಧಾರದ ಮೇಲೆ ಇದೀಗ ಒಂದು ಲಕ್ಷ ರೂ. ಜಮಾವಣೆಯಾಗಿದೆ. ಅದನ್ನ ಕೂಡಲೇ ಸಂತ್ರಸ್ತರಿಗೆ ಹಂಚಿಕೆ ಮಾಡಲಾಗುವುದು ಎಂದು ರಾಯಚೂರು ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಗುರುಪ್ರಸಾದ್ ತಿಳಿಸಿದ್ದಾರೆ.