ರಾಯಚೂರು : ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹವಾಗುತ್ತಿರುವ ದೇಣಿಗೆ ಲೆಕ್ಕ ಕೇಳುವುದಕ್ಕೆ ಸಿದ್ದರಾಮಯ್ಯ ಯಾವನು? ಎಂದು ಸಚಿವ ಕೆ ಎಸ್ ಈಶ್ವರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ರಾಷ್ಟ್ರದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜನರು ದೇಣಿಗೆ ನೀಡುತ್ತಿದ್ದಾರೆ. ಆದ್ರೆ, ಸುಪ್ರೀಂಕೋರ್ಟ್ ಕೇಸ್ ಇತ್ಯರ್ಥವಾದ ಬಳಿಕವೂ ಸಹ ಸಿದ್ದರಾಮಯ್ಯ ರಾಮಮಂದಿರ ವಿವಾದಿತ ಸ್ಥಳ ಎಂದು ಮತ್ತೊಂದು ವಿವಾದ ಹುಟ್ಟು ಹಾಕುತ್ತಿದ್ದಾರೆ. ಸಿದ್ದರಾಮಯ್ಯ ರಾಮಮಂದಿರದ ಲೆಕ್ಕ ಕೇಳುವುದಕ್ಕೆ ಯಾರು? ಎಂದು ಏಕವಚನದಲ್ಲಿ ತರಾಟೆ ತೆಗೆದುಕೊಂಡರು.
ಕೂಲಿ ಕೆಲಸ ಮಾಡುವವರು 10 ರೂಪಾಯಿ ದೇಣಿಗೆ ನೀಡುತ್ತಿದ್ದಾರೆ. ಅವರಿಗೆ ಕೇಳುವುದಕ್ಕೆ ಹಕ್ಕಿದೆ, ಇವನಿಗೆ ಏನಿದೆ?. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಯೂ ಲೆಕ್ಕಕಿಲ್ಲ. ಇನ್ನಾದರೂ ರಾಮನ ಮಂದಿರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದರು.
ಇನ್ನು, ಮಂಡ್ಯದಲ್ಲಿ ಗಂಡು ಕರುಗಳು ಮೃತಪಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಮಾಹಿತಿಯಿಲ್ಲ. ಸಮಗ್ರ ಮಾಹಿತಿ ಇಲ್ಲದೇ ಮಾತನಾಡುವುದು ಸರಿಯಲ್ಲ. ಗೋ ಹತ್ಯೆ ನಿಷೇಧ ಜಾರಿಗೆ ತರಲಾಗುತ್ತದೆ. ಜೊತೆಗೆ ಕುರುಬ ಸಮುದಾಯದ ಎಸ್ಟಿ ಮೀಸಲಾತಿ ವಿಚಾರಕ್ಕೆ ಈಗಾಗಲೇ ಕುಲಶಾಸ್ತ್ರ ಅಧ್ಯಯನ ವರದಿ ಬರಬೇಕಿದೆ ಎಂದರು.