ರಾಯಚೂರು : ಇಲ್ಲಿನ ಆರ್ಟಿಪಿಎಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಇಂಜಿನಿಯರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಕ್ತಿನಗರದಲ್ಲಿ ನಡೆದಿದೆ. ಪಾರ್ವತಿ(30) ಎಂಬುವರೆ ಸಾವನ್ನಪ್ಪಿದ ಇಂಜಿನಿಯರ್ ಆಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಶುಕ್ರವಾರ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಶಕ್ತಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮುಂದಿನ ಕ್ರಮಕೈಗೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಪಾಲಕರಿಗೆ ಒಪ್ಪಿಸಲಾಗಿದೆ. ಈ ಬಗ್ಗೆ ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಗೆ ಕಾರಣ?: ಇಂಜಿನಿಯರ್ ಪಾರ್ವತಿ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬರಬೇಕಿದ್ದು, ಈಗಾಗಲೇ ಹಲವು ಅನುಮಾನಗಳು ಮೂಡಿವೆ. ಪಾರ್ವತಿಗೆ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಸೋಮನಾಥ ಎಂಬಾತನ ಜೊತೆ ಸ್ನೇಹ ಬೆಳೆದಿತ್ತು. ಈ ವಿಚಾರ ತಿಳಿದು ಸೋಮನಾಥನ ಪತ್ನಿ ವೇದಾ ಕಳೆದ ಜನವರಿ 14ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.
ಅಲ್ಲದೆ, ಪತ್ನಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸೋಮನಾಥ ಕೂಡ ಜನವರಿ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎಲ್ಲ ವಿಷಯ ತಿಳಿದಾಕ್ಷಣ ಪಾರ್ವತಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ, ಅದೃಷ್ಟವಶಾತ್ ಬದುಕಿದ್ದಳು. ಶುಕ್ರವಾರ ಸಂಜೆ ಆರ್‌ಟಿಪಿಎಸ್ ಕ್ವಾರ್ಟರ್ಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆ ನೀಡುವಂತೆ ಒತ್ತಾಯಿಸಿ ಪತ್ನಿಯನ್ನೇ ಕೊಂದ ಪತಿ!