ರಾಯಚೂರು: ವೃದ್ಧನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪಶ್ಚಿಮ ಠಾಣೆ ಪೊಲೀಸರು ಯಶ್ವಸಿಯಾಗಿದ್ದಾರೆ.
ಅಖಿಲೇಶ್ ಹಾಗೂ ಗೌತಮ್ ಬಂಧಿತ ಆರೋಪಿಗಳು. ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ನ್ಯಾಯಾಂಗ ಇಲಾಖೆ ನಿವೃತ್ತ ಶಿರಸ್ತೇದಾರ್ ಪಂಪಾಪತಿ ಎಂಬುವವರನ್ನ ಕಳೆದ ಭಾನುವಾರ ಹತ್ಯೆ ಮಾಡಿ, ಆರೋಪಿಗಳು ಮನೆಯಲ್ಲಿ 50 ಸಾವಿರ ರೂ, ನಗದು ಹಾಗೂ 1.23 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಈ ಕುರಿತು ಪತ್ನಿ ಉಮಾದೇವಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಕೊಲೆ ಆರೋಪಿ ಅಖಿಲೇಶ್ ಪಂಪಾಪತಿ ಕಿರಿಯ ಸಹೋದರನ ಮೊಮ್ಮಗ ಎಂದು ತಿಳಿದು ಬಂದಿದೆ. ಸದ್ಯ ಬಂಧಿತರಿಂದ ಮೊಬೈಲ್, ಹಣ ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಮೊಮ್ಮಗನಿಂದ ಹತ್ಯೆ:
ಮಕ್ಕಳಿಲ್ಲದ ಪಂಪಾಪತಿ ಹಾಗೂ ಪತ್ನಿ ಉಮಾದೇವಿ ಸಹೋದರಿ ಪುತ್ರ ಅಕ್ಷಯ ಕುಮಾರ ಅವರೊಂದಿಗೆ ವಾಸವಿದ್ದರು. ಕಳೆದ ರವಿವಾರ ಪರಿಚಯಸ್ಥರ ಮದುವೆ ಹಿನ್ನೆಲೆಯಲ್ಲಿ ಪತ್ನಿ ಮದುವೆ ಸಮಾರಂಭಕ್ಕೆ ತೆರಳಿದ್ದರು. ಇತ್ತ ಪಂಪಾಪತಿ ಮನೆಯಲ್ಲಿ ಒಂಟಿಯಾಗಿದ್ದರು. ಈ ವೇಳೆ, ಪಂಪಾಪತಿ ಕಿರಿಯ ಸಹೋದರನ ಮೊಮ್ಮಗ ಅಖಿಲೇಶ್ ತನ್ನ ಸ್ನೇಹಿತ ಗೌತಮ್ ಜತೆಗೆ ಬಂದು 10 ಸಾವಿರ ರೂ ನೀಡುವಂತೆ ಕೇಳಿದ್ದಾನೆ. ಹಣ ನೀಡಲು ನಿರಾಕರಿಸಿದ ವೇಳೆ ಸ್ನೇಹಿತನ ಜತೆ ಸೇರಿಕೊಂಡು ಹತ್ಯೆ ಮಾಡಿ ಹಣ, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕದ್ದ ಹಣದಲ್ಲಿ ಪ್ರೇಯಸಿಗೆ ಮೊಬೈಲ್ :
ಸ್ನೇಹಿತನ ಜತೆ ಸೇರಿಕೊಂಡು ಅಜ್ಜನ ಕೊಲೆ ಮಾಡಿದ ಮೊಮ್ಮಗ ಅಖಿಲೇಶ್ ಪ್ರೇಯಸಿಗೆ 14 ಸಾವಿರ ರೂ. ಮೌಲ್ಯದ ಹೊಸ ಮೊಬೈಲ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜಿಗೆ 5 ಸಾವಿರ ರೂ. ಶುಲ್ಕ ಪಾವತಿ ಮಾಡಿದ್ದಾನೆ ಎನ್ನಲಾಗ್ತಿದೆ.
ಇದನ್ನೂ ಓದಿ: 17 ನೇ ಮಹಡಿಯಿಂದ ಕೆಳಗೆ ಧುಮುಕಿದ 3 ವರ್ಷದ ಬಾಲಕ ಸಾವು