ರಾಯಚೂರು: ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮದಿನದ ನಿಮಿತ್ತ ಈದ್ ಮಿಲಾದ್ ಹಬ್ಬವನ್ನು ರಾಯಚೂರಿನಲ್ಲಿ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು.
ಹಬ್ಬದ ನಿಮಿತ್ತ ಮಧ್ಯಾಹ್ನ ಮುಸ್ಲಿಂ ಧರ್ಮ ಗುರು ಸೈಯದ್ ತಾಜುದ್ದೀನ್ ಅಹ್ಮದ್ ಖಾದ್ರಿ ಅವರು ಸಾಮೂಹಿಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ನಗರದ ತೀನ್ ಖಂದಿಲ್ ವೃತ್ತದಿಂದ ಭಗತ್ ಸಿಂಗ್ ವೃತ್ತ, ಜೈಲ್ ರೋಡ್, ನಗರಸಭೆಯ ಮೂಲಕ ಅರಬ್ ಮೊಹಲ್ಲಾದವರೆಗೆ ಸಾಗಿತು.
ಮೆರಣಿಗೆಯುದ್ದಕ್ಕೂ ಮುಸ್ಲಿಂ ಬಾಂಧವರು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಕುರಿತ ನಾತೆ ಪಾಕ್ ಓದಿದರು, ಇನ್ನೂ ಕೆಲವರು ಖವಾಲಿ ಹಾಡುಗಳನ್ನು ಹಾಡಿದರು. ಇನ್ನೂ ತೆರೆದ ವಾಹನಗಳಲ್ಲಿ ಮುಸ್ಲಿಮರ ಪವಿತ್ರ ಸ್ಥಳ ಮಕ್ಕಾ ಹಾಗೂ ಮದೀನಗಳ ಸ್ಥಬ್ದ ಚಿತ್ರ ಪ್ರದರ್ಶನ ಕೂಡ ಮಾಡಲಾಯಿತು.
ಮೆರವಣಿಗೆ ವೇಳೆ ಮುಸ್ಲಿಂ ಭಾಂದವರು ಚಾಕಲೆಟ್, ವಿವಿಧ ಬಗೆಯ ತಂಪು ಪಾನಿಯಾ, ಬಾಳೆ ಹಣ್ಣು ಹಾಗೂ ಸಿಹಿ ಪದಾರ್ಥ ಹಂಚಿದರು. ಇನ್ನೂ ಕೆಲವರು ರಕ್ತದಾನ ಮಾಡಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಮೆರವಣಿಗೆಯಲ್ಲಿ ಶಾಸಕ ಡಾ. ಶಿವರಾಜ ಪಾಟೀಲ್, ಮುಖಂಡರಾದ ರವಿ ಬೋಸರಾಜು ಸೇರಿದಂತೆ ವಿವಿಧ ಪಕ್ಷದ ಮುಖಂಡರು ಸಮಾಜದ ಮುಖಂಡರು ಭಾಗವಹಿಸಿದ್ದರು.