ಲಿಂಗಸುಗೂರು: ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಕೊರೊನಾದಿಂದ ತೊಂದರೆ ಆಗದಂತೆ ಆಡಳಿತಾಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿಕಾಂತರೆಡ್ಡಿ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತುರ್ತುಸಭೆ ನಡೆಸಿದ ಅವರು, ಕೊರೊನಾ ಸಂದರ್ಭ ಹೊರ ಜಿಲ್ಲೆ ಮತ್ತು ರಾಜ್ಯದಿಂದ ಬರುವವರ ಸಂಖ್ಯೆ ಹೆಚ್ಚಿದೆ. ಹೀಗೆ ಬರುವ ಜನರು ಹಾಗೂ ಇತರೆ ಜನರಿಗೆ ತೊಂದರೆ ಆಗದಂತೆ ಕಾಳಜಿ ವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಆಡಳಿತಾಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಯೋಗದಲ್ಲಿ ಪ್ರತಿಯೊಂದು ಯೋಜನೆ ಹಾಗೂ ಸ್ಥಳೀಯ ಸಮಸ್ಯೆಗಳ ಪರಿಶೀಲನೆ ನಡೆಬೇಕು. ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈಗಾಗಲೇ ಜಿಲ್ಲೆಯ 23 ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛ ಭಾರತ ಯೋಜನೆಯಡಿ ಕಸದಬುಟ್ಟಿ ನೀಡಲಾಗಿದೆ. ಉಳಿದ ಪಂಚಾಯಿತಿಗಳಿಗೆ ಟೆಂಡರ್ ಕರೆದು ಪೂರೈಕೆ ಮಾಡಲಾಗುತ್ತದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕ ಸ್ಥಾಪಿಸಬೇಕು. ತಾಲೂಕಿನ ಅವಶ್ಯಕತೆ ಇರುವ ಶಾಲೆಗಳಿಗೆ ಅಕ್ಟೋಬರ್ ಒಳಗಡೆ ಕಾಂಪೌಂಡ್ ಗೋಡೆ, ಬಿಸಿಯೂಟ ಅಡುಗೆ ಕೊಠಡಿ ನಿರ್ಮಿಸಲು ಮುಂದಾಗಬೇಕು ಎಂದರು.
ಈ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಂಪಾಪತಿ ಹಿರೇಮಠ ಲಿಂಗಸುಗೂರು, ಬಾಬು ರಾಠೋಡ ಮಸ್ಕಿ ಸೇರಿದಂತೆ ಅಡಳಿತಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.