ರಾಯಚೂರು : ಕೊರೊನಾ ಸೋಂಕಿತರಿಗೆ ಅಗತ್ಯವಿದ್ದಲ್ಲಿ ಚಿಕಿತ್ಸೆ ನೀಡಲು ಜಿಲ್ಲೆಯ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುವುದು. ಅದಕ್ಕೆ ಖಾಸಗಿ ಆಸ್ಪತ್ರೆಗಳು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್ ವೆಂಕಟೇಶ್‌ಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ, ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ದಿನಂಪ್ರತಿ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಿವೆ. ನಗರ ಸೇರಿ ಜಿಲ್ಲೆಯಾದ್ಯಂತ ಹಲವು ಖಾಸಗಿ ಆಸ್ಪತ್ರೆಗಳಿವೆ.
ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಹೊರತುಪಡಿಸಿ ಬಾಕಿ ಇರುವ ಹಾಸಿಗೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಖಾಸಗಿಯಾಗಿ ಕೊರೊನಾ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು. ಈಗಾಗಲೇ ಓಪೆಕ್ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ರಿಮ್ಸ್ ಹಾಗೂ ನವೋದಯ ಆಸ್ಪತ್ರೆಗಳಲ್ಲಿ ಅದಕ್ಕೆ ವ್ಯವಸ್ಥೆ ಮಾಡಲಾಗಿದೆ.
ಯರಮರಸ್ ಕ್ವಾರಂಟೈನ್ ಕೇಂದ್ರವನ್ನು ಸಹ ಕೇರ್ ಸೆಂಟರ್ ಆಗಿ ಬದಲಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿಟ್ರೆ, ಬಳಕೆಗೆ ಅನುಕೂಲವಾಗಲಿದೆ. ಪರಿಸ್ಥಿತಿ ಗಂಭೀರತೆ ಅರಿತು ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು.