ರಾಯಚೂರು: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳನ್ನ ಕಳೆದುಕೊಂಡ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಮನೆ ನಿರ್ಮಾಣ ಮಾಡಿಕೊಳ್ಳಲು ಟಿನ್ ಶೆಡ್ಗಳನ್ನ ಇಂದು ವಿತರಣೆ ಮಾಡಲಾಯಿತು.
ರಾಯಚೂರು ತಾಲೂಕಿನ ನೂರಾರು ಮನೆಗಳು ಮಳೆಯಿಂದ ಹಾನಿಗೀಡಾಗಿದ್ದವು. ಇದರಿಂದ ಮನೆ ಕಳೆದುಕೊಂಡಿದ್ದ ಇಡಪನೂರು ಗ್ರಾಮದ ಕೆಲ ಕುಟುಂಬಳಿಗೆ ಜಿಲ್ಲಾಡಳಿತ ಸರ್ಕಾರಿ ಶಾಲೆ, ಸಮುದಾಯದ ಭವನದಲ್ಲಿ ತಾತ್ಕಾಲಿಕವಾಗಿ ವಾಸಿಸಲು ಅವಕಾಶ ಮಾಡಿಕೊಟ್ಟು, ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಒಂದೂವರೆ ತಿಂಗಳು ಕಳೆದರೂ ಶಾಲೆ ಹಾಗೂ ಸಮುದಾಯದ ಭವನದಲ್ಲಿ ವಾಸಿಸುವ ಕುಟುಂಬಗಳಿಗೆ ನೀಡಿದ ಭರವಸೆ ಈಡೇರಿಸಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಇಂದು ಟಿನ್ ಶೆಡ್ಗಳು, ಕಟ್ಟಿಗೆ, ಆಹಾರದ ಕಿಟ್ಗಳನ್ನ ಸಂತ್ರಸ್ತರಿಗೆ ಹಂಚಿಕೆ ಮಾಡಿದ್ದಾರೆ.