ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಗುರುಗುಂಟಾ ಅಮರೇಶ್ವರ ದೇವಸ್ಥಾನ ಬಳಿ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ವ್ಯಾಪಾರಿಗಳು ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದೇವಸ್ಥಾನ ಬಳಿ ವಿಭೂತಿ, ಕುಂಕುಮ, ಹೋಟೆಲ್, ಜನರಲ್ ಸ್ಟೋರ್ ಸೇರಿದಂತೆ 17 ಕುಟುಂಬಸ್ಥರು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡಿದ್ದಾರೆ. ಹೋಳಿ ಹುಣ್ಣಿಮೆಯಿಂದ ಯುಗಾದಿವರೆಗಿನ ಜಾತ್ರೆ ಬಂದ್ ಆಗಿದ್ದರಿಂದ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ.
ಲಾಕ್ಡೌನ್ನಿಂದಾಗಿ ದೇವಸ್ಥಾನಕ್ಕೆ ಬೀಗ ಹಾಕಲಾಗಿದ್ದು, ಜಾತ್ರೆ, ಸೀಸನ್ ಆಧರಿಸಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಅಂಗಡಿ ಮಾಲು ತಂದುಕೊಂಡಿದ್ದೇವೆ. ಅಲ್ಲದೇ ಬಾಡಿಗೆ ಕಟ್ಟಲು ಪರದಾಡುವಂತಾಗಿದ್ದು, ಕುಟುಂಬ ನಿರ್ವಹಣೆಗೆ ತೊಂದರೆ ಅಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ದೇವಸ್ಥಾನ ಸಮಿತಿ, ವ್ಯಾಪಾರ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ವ್ಯಾಪಾರಿಗಳ ಅಂಗಡಿ ಬಾಡಿಗೆ ಮನ್ನಾ ಮಾಡಬೇಕು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರಿಗೆ ಕನಿಷ್ಠ ಮಟ್ಟದ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ವ್ಯಾಪಾರಿ ಆನಂದಸ್ವಾಮಿ, ವಿಭೂತಿ ವ್ಯಾಪಾರಿ ಮನವಿ ಮಾಡಿದ್ದಾರೆ.