ರಾಯಚೂರು: ಕಲ್ಲಿದಲ್ಲು ಆಧಾರಿತ ಶಾಖೋತ್ಪನ್ನ ಕೇಂದ್ರಗಳಿಗೆ ವಿದ್ಯುತ್ ಬೇಡಿಕೆ ಕುಸಿತದಿಂದಾಗಿ ಶಕ್ತಿನಗರದ ಆರ್ಟಿಪಿಎಸ್ನ 5 ವಿದ್ಯುತ್ ಉತ್ಪಾದನಾ ಘಟಕಗಳನ್ನ ಸ್ಥಗಿತಗೊಳಿಸಲಾಗಿದೆ.
2, 3, 4, 5 ಮತ್ತು 7ನೇ ಘಟಕಗಳನ್ನ ಸ್ಥಗಿತಗೊಳಿಸಲಾಗಿದೆ. ಸೋಮಾವಾರ ಎರಡು ಘಟಕಗಳನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಪುನಃ ಮೂರು ಘಟಕಗಳನ್ನ ಸ್ಥಗಿತಗೊಳಿಸಲಾಗಿದೆ. ಉಳಿದಂತೆ 1 ಮತ್ತು 6ನೇ ಘಟಕಗಳಿಂದ 282 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ರಾಜ್ಯ ವಿದ್ಯುತ್ ಜಾಲಕ್ಕೆ ರವಾನೆ ಮಾಡಲಾಗುತ್ತಿದೆ. 8ನೇ ಘಟಕ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದೆ.
8 ಘಟಕಗಳನ್ನ ಹೊಂದಿರುವ ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರ 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. 1ರಿಂದ 7 ಘಟಕಗಳು ತಲಾ 210 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದ್ದರೆ, 8ನೇ ಘಟಕ 250 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ.
ಸದ್ಯ ಅಂಫಾನ್ ಚಂಡಮಾರುತದಿಂದ ಗಾಳಿ ಹೆಚ್ಚಾಗಿ ಬೀಸುವುದರಿಂದ ಪವನ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ. ಹಾಗಾಗಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಕೇಂದ್ರಗಳಿಗೆ ಬೇಡಿಕೆ ಕುಸಿದಿದೆ ಎನ್ನಲಾಗುತ್ತಿದೆ.