ರಾಯಚೂರು: ಕೇರಳ-ಕರ್ನಾಟಕ ಮಧ್ಯೆ ಕೆಎಸ್ಆರ್ಟಿಸಿ ಲೋಗೋ ವಿವಾದ ವಿಚಾರದಲ್ಲಿ ಟ್ರೇಡ್ ಮಾರ್ಕ್ ರಿಜಿಸ್ಟರ್ನಲ್ಲಿ ವಾಜ್ಯ ಹೂಡಿದ್ರು. ಈಗ ಕೇರಳ ಪರವಾಗಿ ಆಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಮತ್ತು ಕಾರ್ಪೋರೇಟ್ ಕಂಪನಿಗಳು ಒಂದೇ ಹೆಸರಿನಲ್ಲಿ ಇರಬಾರದು ಎಂಬ ನಿಯಮವಿದೆ. ನಮ್ಮ ದೇಶದಲ್ಲಿ ಮತ್ತು ಬೇರೆ ದೇಶದಲ್ಲಿ ಈ ನಿಯಮವಿದೆ. ಕೇರಳ-ಕರ್ನಾಟಕ ಲಾಭದಾಯಕ ಕಾರ್ಪೋರೇಟ್ ಕಂಪನಿಗಳಲ್ಲ. ನಮ್ಮದು ಸಾರ್ವಜನಿಕರಿಗೆ ಸೇವೆ ನೀಡುವ ಸಂಸ್ಥೆಗಳಾಗಿವೆ. ಅದರ ಹೆಸರಿನಲ್ಲಿ ನಾವು ಲಾಭ ಮಾಡುವುದಿಲ್ಲ. ಅನವಶ್ಯಕವಾಗಿ ಗೊಂದಲ ಸೃಷ್ಟಿಯಾಗಿದೆ. ನಾನು ಅಧಿಕಾರಿಗಳಿಗೆ ಆದೇಶದ ಪ್ರತಿ ಪಡೆಯಲು ಹೇಳಿದ್ದೇನೆ. ಆ ಆದೇಶ ನೋಡಿ ಕಾನೂನು ಸಲಹೆ ಪಡೆದು ಮನವಿ ಮಾಡುವುದರ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಜಿಲ್ಲಾಡಳಿತ ಹಳ್ಳಿಗಳಿಗೆ ಹೋಗಿ, ಸೋಂಕಿತರನ್ನ ಪತ್ತೆ ಹಚ್ಚಿ ಸ್ಥಳಾಂತರ ಮಾಡಿಸಲು ಜನರಲ್ಲಿ ಜಾಗೃತಿ ಮೂಡಿಸಿದೆ. ಹೀಗಾಗಿ ಕೊರೊನಾ ಜಿಲ್ಲೆಯಲ್ಲಿ ಹತೋಟಿಗೆ ಬಂದಿದೆ. ಇಂದು ಮತ್ತೊಂದು ಸುತ್ತಿನ ಸಭೆ ಮಾಡುತ್ತೇವೆ. ರಿಮ್ಸ್ ಹಾಗೂ ಓಪೆಕ್ ಸರ್ಕಾರಿ ಎರಡೂ ಆಸ್ಪತ್ರೆಗಳು ಸುಧಾರಣೆ ಆಗಿವೆ. ಜನರಿಗೆ ಉತ್ತಮ ಸೇವೆ ಕೊಡುತ್ತೇವೆ. ನಾವು ಹಾಗೂ ನಮ್ಮ ಅಧಿಕಾರಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಿ, ವ್ಯವಸ್ಥೆ ಬದಲಾಯಿಸಲಾಗಿದೆ. ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ.
ಸದ್ಯ ಬ್ಲ್ಯಾಕ್ ಫಂಗಸ್ ಪ್ರಕರಣಗಳು ನಮಗೆ ಸವಾಲಾಗಿವೆ. ಜಿಲ್ಲೆಯಲ್ಲಿ 41 ಜನರಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿವೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ 40-45 ದಿನ ಚಿಕಿತ್ಸೆ ಕೊಡಬೇಕಾಗುತ್ತೆ. ಅವರಿಗೆ ಸರ್ಕಾರ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ ಎಂದರು.
ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಪ್ರತಿಕ್ರಿಯಿಸಿ, ಇಂದು ಅಥವಾ ನಾಳೆ ತಜ್ಞರ ಅಭಿಪ್ರಾಯ ಪಡೆದು, ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. 7000ದವರೆಗೆ ಪಾಸಿಟಿವ್ ಬರುವವರೆಗೂ ತಜ್ಞರು ಲಾಕ್‌ಡೌನ್ ಮುಂದುವರೆಸಲು ಸಲಹೆ ನೀಡಿದ್ದಾರೆ ಎಂದರು.
ರಿಮ್ಸ್ನಲ್ಲಿ 20kl ಆಕ್ಸಿಜನ್ ಘಟಕ ಇಂದಿನಿಂದ ಪ್ರಾರಂಭವಾಗಲಿದೆ. 30 ಆಕ್ಸಿಜನ್ ಕಾನ್ಸ್ಂಟ್ರೇಟರ್ ಬಂದಿವೆ. ಮುಂದಿನ ದಿನಗಳಲ್ಲಿ ನಾವ್ಯಾರೂ ಮೈ ಮರೆಯುವಂತಿಲ್ಲ. ಆ ರೀತಿಯಲ್ಲಿ ಎಲ್ಲಾ ಮುಂಜಾಗ್ರತೆ ವಹಿಸಲಾಗಿದೆ.
ಗುಜರಿಗೆ ಹಾಕುವ ಬಸ್ಗಳನ್ನ ಆಕ್ಸಿಜನ್ ಹಾಗೂ ಐಸಿಯು ಬಸ್ಗಳನ್ನಾಗಿ ಮಾಡಲಾಗುವುದು. ಸಂಸದರು ಹಾಗೂ ಶಾಸಕರು ತಮ್ಮ ನಿಧಿಯನ್ನು ಕೊಟ್ಟು ಸಹಕರಿಸುತ್ತಿದ್ದಾರೆ. ಐಸಿಯು ಬಸ್ ಮಾಡಲು 8ರಿಂದ 10 ಲಕ್ಷ ವೆಚ್ಚವಾಗುತ್ತದೆ. ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆಯಡಿಯಲ್ಲಿ 1988 ಕೋಟಿ ರೂ. ಆಡಳಿತಾತ್ಮಕ ಮುಂಜೂರಾತಿ ಪಡೆದುಕೊಂಡಿದೆ. ಅದರಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಾಲಿರುತ್ತೆ. ಇದರಿಂದಾಗಿ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರು ತಲುಪಿಸಲಾಗುತ್ತದೆ ಎಂದರು.
ಮೂರನೇ ಅಲೆಗೆ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಬ್ಲ್ಯಾಕ್ ಫಂಗಸ್ಗೆ ಇಂಜೆಕ್ಷನ್ ಉತ್ಪಾದನೆ ನಮ್ಮಲ್ಲಿ ಇಲ್ಲ. ಬೇರೆ ಕಡೆಗಳಿಂದ ಸರಬರಾಜು ಮಾಡಿಕೊಳ್ಳಲಾಗುತ್ತಿದೆ. ಕೇಂದ್ರದಿಂದ ಅದನ್ನ ಬೇರೆ ಭಾಗಳಿಂದ ತರಿಸಿಕೊಳ್ಳಲಾಗ್ತಿದೆ. ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡುತ್ತಿದ್ದಾರೆ. ವೈದ್ಯರ ಪ್ರಕಾರ ಸುಮಾರು 40-45 ದಿನ ಆಸ್ಪತ್ರೆ ನಿಗಾದಲ್ಲೇ ಇರಬೇಕಾಗುತ್ತದೆ. ಮೂರ್ನಾಲ್ಕು ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಇಂಜೆಕ್ಷನ್ ದೊರೆಯಲಿವೆ ಎಂದರು.
ಓದಿ: ಕರ್ನಾಟಕದ KSRTC ಈಗ ಕೇರಳ ಪಾಲು!: ಇನ್ಮುಂದೆ ಈ ಹೆಸರು ಬಳಸುವಂತಿಲ್ಲ