ರಾಯಚೂರು: ನಗರಸಭೆ 31ನೇ ವಾರ್ಡ್ ಸದಸ್ಯೆ ರೇಣಮ್ಮ ಭೀಮರಾಯ ವಿರುದ್ಧ ಸದರ್‌ಬಜಾರ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.
ನಗರಸಭೆ ಚುನಾವಣೆ ವೇಳೆ ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ಕಿಳ್ಳೆಕ್ಯಾತ ಸಮುದಾಯಕ್ಕೆ ಸೇರಿರುವ ರೇಣಮ್ಮ, ಶಿಳ್ಳೆಕ್ಯಾತ ಜಾತಿಯಲ್ಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದಾರೆ ಎನ್ನುವ ದೂರು ನೀಡಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಮಿತಿ ರಚಿಸಿ ವರದಿ ತರಿಸಿಕೊಂಡು, ಪರಿಶೀಲನೆ ಸಭೆ ನಡೆಸಿ ಜಾತಿ ಪ್ರಮಾಣಪತ್ರ ರದ್ದುಗೊಳಿಸಿದ್ದರು.
ಈ ಹಿನ್ನೆಲೆಯಲ್ಲಿ ಕಲಬುರಗಿ ಪ್ರಾದೇಶಿಕ ಆಯುಕ್ತರು ರೇಣಮ್ಮನ ನಗರಸಭೆ ಸದಸ್ಯತ್ವವನ್ನು ರದ್ದುಪಡಿಸಿದ್ದು, ಇದನ್ನು ಪ್ರಶ್ನಿಸಿ ರೇಣಮ್ಮ ಹೈಕೋರ್ಟ್ ಮೊರೆ ಹೋಗಿದ್ರು. ನ್ಯಾಯಲಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಗುಪ್ತ ಮತದಾನಕ್ಕೆ ಅವಕಾಶ ಮಾಡಿಕೊಟ್ಟು, ಮತವನ್ನ ಪ್ರತ್ಯೇಕವಾಗಿ ಕಾಯ್ದಿರಿಸುವಂತೆ ಸೂಚಿಸಿ ಫಲಿತಾಂಶ ಪ್ರಕಟಿಸದಂತೆ ತಡೆಯಾಜ್ಞೆ ನೀಡಿತ್ತು. ಇದರ ನಡುವೆ ಇದೀಗ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧಿಕಾರಿ ಶಿವಾನಂದರಿಂದ ಸದರ್‌ಬಜಾರ್ ಠಾಣೆಯಲ್ಲಿ ದೂರಿನ ಮೇರೆಗೆ ಕಲಂ 198, 420ರನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.