ರಾಯಚೂರು: ಜಿಲ್ಲೆಯ ಕಾರ್ಮಿಕರ ಬೇಡಿಕೆ ಈಡೇರಿಸಲು ವಿಫಲರಾದ ಹಾಗೂ ನಿಷ್ಠಾವಂತ ಪೊಲೀಸರಿಗೆ ರಕ್ಷಣೆ ನೀಡಲು ಆಗದ ಜನ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರನ್ನು ಕೈಬಿಡುವಂತೆ ಅಗ್ರಹಿಸಿ ಸಿಪಿಐಎಂಎಲ್ ಪಾರ್ಟಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಿಎಂ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಬಸ್ಗೆ ಮುತ್ತಿಗೆ ಹಾಕಿದ ಘಟನೆಯಿಂದ ಸಿಪಿಐ ದತ್ತಾತ್ರೆಯ ಕಾರ್ನಾಡ್ ಹಾಗೂ ಪಿಎಸ್ಐ ಲಿಂಗಪ್ಪ ಅವರನ್ನು ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಇದು ಸರಿಯಲ್ಲ ಎಂದು ಸರ್ಕಾರದ ನಿರ್ಧಾರವನ್ನು ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದರ ಬೆನ್ನಲ್ಲೇ ಇಂದು ಸಿಪಿಐಎಂಎಲ್ ರೆಡ್ ಸ್ಟಾರ್ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತು.
ಹಲವಾರು ವರ್ಷಗಳ ಬೇಡಿಕೆಯಾದ ತುಂಗಭದ್ರಾ ವಲಯ ಹಂಗಾಮಿ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸದೇ, ಇತ್ತ ಸಿಎಂ ಗಮನಕ್ಕೂ ತಾರದೆ ನಾಡಗೌಡ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರು ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸದೇ ವಿಫಲರಾಗಿದ್ದು, ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.