ರಾಯಚೂರು: ಕೊರೊನಾ ಎರಡನೇ ಅಲೆಯಿಂದ ವಿವಿಧ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಕಷ್ಟ ಎದುರಾಗಿದೆ. ಜನರಿಗೆ ಮನೋರಂಜನೆಯ ಕೇಂದ್ರವಾಗಿರುವ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಪಾಡೊಂತೂ ಹೇಳ ತೀರದಾಗಿದೆ.
ಕೊರೊನಾ ನಿಯಂತ್ರಣದ ಸಲುವಾಗಿ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವನ್ನು ಸರ್ಕಾರ ಬಂದ್ ಮಾಡಿಸಿದೆ. ಇದರಿಂದ ಚಿತ್ರೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ಚಿತ್ರಮಂದಿರಗಳಲ್ಲಿ ದುಡಿಯುವ ಕಾರ್ಮಿಕರಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಸಿನಿಮಾ ಮಂದಿರಗಳಿವೆ. ಒಂದು ಚಿತ್ರಮಂದಿರದಲ್ಲಿ ಕನಿಷ್ಠ 10ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ತಿಂಗಳಿಗೆ ಬರುವ ಸಂಬಳದಿಂದಲೇ ಅವರ ಬದುಕು ನಡೆಯೋದು. ಆದ್ರೆ ಇದೀಗ ಕಳೆದ ಎರಡ್ಮೂರು ತಿಂಗಳಿನಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದ್ದು, ಕಾರ್ಮಿಕರ ಕೆಲಸಕ್ಕೆ ಕುತ್ತು ಬಂದಿದೆ..
ಚಿತ್ರಮಂದಿರ ಬಂದ್ ಮಾಡಿದ್ದರೂ, ಮಾಲೀಕರು ಚಿತ್ರಮಂದಿರ ನಿರ್ವಹಣೆ ಮಾಡಬೇಕಾಗಿದ್ದು, ಆರ್ಥಿಕವಾಗಿ ಹೊರೆಯಾಗುತ್ತಿದೆ. ಇದನ್ನು ಚಿತ್ರಮಂದಿರ ಪ್ರದರ್ಶನದಿಂದ ಬರುವ ಆದಾಯದಿಂದಲೇ ನಿಭಾಯಿಸಲಾಗುತ್ತಿತ್ತು. ಆದ್ರೆ ಇದೀಗ ಆದಾಯಕ್ಕೆ ಕೊಕ್ಕೆ ಬಿದ್ದು, ನಿರ್ವಹಣೆ ವೆಚ್ಚ ಹೊರೆಯಾಗಿದೆ. ಹಾಗಾಗಿ 10ಕ್ಕೂ ಹೆಚ್ಚು ಕಾರ್ಮಿಕರಿರಬೇಕಾದ ಜಾಗದಲ್ಲಿ ಅವಶ್ಯಕತೆಯಿರುವವರನ್ನ ಇರಿಸಿಕೊಂಡು ಹೆಚ್ಚುವರಿಯಾಗಿರುವವರ ಕಾರ್ಮಿಕರನ್ನು ಕೆಲಸದಿಂದ ತೆಗೆದಿದ್ದಾರೆ. ಕಾರ್ಮಿಕರಿಗೆ ಕೆಲಸ, ಸಂಬಂಳವಿಲ್ಲದೆ ಬದುಕು ಅತಂತ್ರವಾಗಿಸಿದೆ.
ಸದ್ಯ ಸರ್ಕಾರ ಸಿನಿಮಾ ಮಂದಿರಗಳಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದು, ಕೆಲಸ ಮಾಡುವ ಕಾರ್ಮಿಕರಿಗೆ ಸಹಾಯಧನ ನೀಡಿಲ್ಲ. ಹೀಗಾಗಿ ಸರ್ಕಾರ ಚಲನಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಹಾಯಧನ ನೀಡುವ ಮೂಲಕ ಕಾರ್ಮಿಕರ ನೆರವಿಗೆ ಬರಬೇಕು ಅಂತಾರೆ ಕಾರ್ಮಿಕರು.