ರಾಯಚೂರು: ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಸಂಯುಕ್ತ ಆಶ್ರಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಜಾಗೃತಿ ಅರಿವು ಸಪ್ತಾಹಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್, ಸಮಾಜಕ್ಕೆ ದೊಡ್ಡ ಪಿಡುಗಾಗಿರುವ ಭ್ರಷ್ಟಾಚಾರದ ನಿರ್ಮೂಲನೆಗೆ ಪ್ರತಿಯೊಬ್ಬರು ಕೈಜೋಡಿಸುವ ಅವಶ್ಯಕತೆಯಿದೆ. ಸಾರ್ವಜನಿಕರ ಕೆಲಸಕ್ಕೆ ಲಂಚ ಪಡೆಯುವುದು ಅಪರಾಧವಾಗಿದೆ. ಅಧಿಕಾರಿಗಳು ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಆಸ್ತಿ ಗಳಿಸುವುದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಅನ್ವಯ ಅಪರಾಧವಾಗಿದೆ. ಭ್ರಷ್ಟಾಚಾರ ತಡೆಗೆ ನಿಗ್ರಹ ದಳವನ್ನ ರಚಿಸಿದ್ದು, ಸಾರ್ವಜನಿಕರು ದೂರು ನೀಡಬಹುದಾಗಿದೆ ಎಂದರು.
ಇದೇ ವೇಳೆ ಭ್ರಷ್ಟಾಚಾರವನ್ನು ಸಮಾಜದಿಂದ ನಿರ್ಮೂಲನೆ ಮಾಡಬೇಕು ಎಂದು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.