ರಾಯಚೂರು: ತಾಲೂಕಿನ ಎಲೆಬಿಚ್ಚಾಲಿ ಗ್ರಾಮದ ಸುತ್ತಮುತ್ತಲಿನ ಪ್ರದೇಶ ವೀಳ್ಯದೆಲೆಗೆ ಭಾರಿ ಪ್ರಸಿದ್ಧಿ. ಇಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ. ಹಾಗಾಗಿ ಎಲೆಬಿಚ್ಚಾಲಿ ಗ್ರಾಮ ವೀಳ್ಯದೆಲೆಗೆ ಪ್ರಸಿದ್ಧಿ ಪಡೆದಿದೆ.
ಆದರೆ ಲಾಕ್ಡೌನ್ ಹೇರಿಕೆಯಿಂದ ಎಲೆಬಿಚ್ಚಾಲಿ ಗ್ರಾಮದ ವೀಳ್ಯದೆಲೆ ಬೆಳೆಗಾರರು ಈಗ ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆದ ಬೆಳೆಗೆ ಸರಿಯಾದ ಮಾರುಟ್ಟೆ ಸಿಗುತ್ತಿಲ್ಲ ಅನ್ನೋದು ಒಂದೆಡೆಯಾದರೆ, ಶ್ರಮವಹಿಸಿ ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗುತ್ತಿಲ್ಲ ಅನ್ನೋದು ಮತ್ತೊಂದು ನೋವಿನ ಸಂಗತಿಯಾಗಿದೆ ಎನ್ನುತ್ತಿದ್ದಾರೆ ಸ್ಥಳೀಯ ರೈತರು.
ಹಲವು ದಿನಗಳ ಬಳಿಕ ಇಲ್ಲಿ ಅಧಿಕ ಪ್ರದೇಶದಲ್ಲಿ ಸೊಂಪಾಗಿ ವೀಳ್ಯೆದೆಲೆಯನ್ನು ಬೆಳೆದಿದ್ದು, ಅದು ಈಗ ಕಟಾವಿಗೂ ಬಂದಿದೆ. ಆದ್ರೆ ಲಾಕ್ಡೌನ್ ಇರುವ ಕಾರಣ ಮಾರಾಟ ಮಾಡಲಾಗುತ್ತಿಲ್ಲ. ಆರಂಭದಲ್ಲಿ ಕೂಲಿ ಆಳುಗಳು ಬರುತ್ತಿರಲಿಲ್ಲ. ಈಗ ಅವರು ಕೆಲಸಕ್ಕೆ ಬಂದರೂ ವೀಳ್ಯದೆಲೆಯನ್ನು ಮಾರುಕಟ್ಟೆಗೆ ಕಳುಹಿಸಲು ಆಗುತ್ತಿಲ್ಲ. ಬಹುತೇಕ ಕಡೆ ಚೆಕ್ ಪೋಸ್ಟ್ಗಳಲ್ಲಿ ತೊಂದರೆಯಾಗುತ್ತಿದೆ.
ಸಾಮಾನ್ಯವಾಗಿ ವೀಳ್ಯದೆಲೆ ಅತ್ಯಧಿಕವಾಗಿ ಪಾನ್ ಶಾಪ್ಗಳಲ್ಲಿ ಬಳಕೆಯಾಗುತ್ತಿತ್ತು. ಕೊರೊನಾ ಲಾಕ್ಡೌನ್ ಆದ ಹಿನ್ನೆಲೆ ಪಾನ್ ಶಾಪ್ಗಳು ಬಂದ್ ಆಗಿವೆ. ರಾಯಚೂರು ಮಾರುಕಟ್ಟೆಗೆ ಕಳುಹಿಸುವ ವೀಳ್ಯದೆಲೆಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಬೇಕಾಗಿದೆ. ಈ ಹಿಂದೆ ಎರಡು ಸಾವಿರ ಎಲೆಗಳಿಗೆ 1500 ರೂ.ವರೆಗೆ ದರವಿತ್ತು. ಆದ್ರೆ ಈಗ 4-5 ನೂರು ರೂ.ಗೆ ಮಾರಾಟ ಮಾಡಬೇಕಾಗಿದೆ.
ಈಗ ಮದುವೆ ಸೇರಿದಂತೆ ಯಾವುದೇ ಶುಭ ಕಾರ್ಯಕ್ರಮಗಳು ಸಹ ನಡೆಯುತ್ತಿಲ್ಲ. ಹಾಗಾಗಿ ವೀಳ್ಯದೆಲೆಯನ್ನು ಕೇಳುವವರೆ ಇಲ್ಲದಂತಾಗಿದೆ. ಎಕರೆ ಪ್ರದೇಶದಲ್ಲಿ ವೀಳ್ಯದೆಲೆಯನ್ನು ಬೆಳೆಯಲು ಕನಿಷ್ಠ ಮೂರ್ನಾಲ್ಕು ಲಕ್ಷ ರೂ. ವ್ಯಯ ಮಾಡಲಾಗುತ್ತಿದೆ. ವ್ಯಯ ಮಾಡಿದ ಹಣ ಸಹ ಕೈಗೆ ಸಿಗುತ್ತಿಲ್ಲ. ಇದರಿಂದ ರೈತ ಮತ್ತೆ ಸಾಲದ ಸುಳಿಗೆ ಸಿಲುಕುವಂತಾಗಿದೆ. ಹಾಗಾಗಿ ಸರ್ಕಾರ ರೈತರ ನೆರವಿಗೆ ಬರಬೇಕು ಎನ್ನುತ್ತಾರೆ ವೀಳ್ಯದೆಲೆ ಬೆಳೆಗಾರ ಕುಮಾರ.