ರಾಯಚೂರು : ಕೊರೊನಾ ವಾರಿಯರ್ ಪತ್ನಿಯೊಬ್ಬರು ಏಕಾಂಗಿಯಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು. ಈ ಮೂಲಕ ಮಹಿಳೆ ನ್ಯಾಯಕ್ಕಾಗಿ ಮೊರೆಯಿಟ್ಟರು. ಮಂಜುಳಾ.ಜೆ ಎಂಬ ಮಹಿಳೆ ಧರಣಿ ನಡೆಸಿದ್ದು, "ಪತಿ ಕೊರೊನಾ ವಾರಿಯರ್ ಆಗಿ ಕಾರ್ಯ ನಿರ್ವಹಿಸಿ ಮೃತಪಟ್ಟರು. ಅವರಿಗೆ ಬರಬೇಕಾದ ಪರಿಹಾರವನ್ನು ಜಿಲ್ಲಾಡಳಿತ ಅವರ ತಾಯಿಯ ಹೆಸರಿಗೆ ಬದಲಾಯಿಸಿದೆ" ಎಂದು ಹೇಳಿದರು.
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ಕೊರೊನಾ ವಾರಿಯರ್ ಲೋಹಿತ್ ಜಿ.ಕೆ. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಮೃತಪಟ್ಟಿದ್ದರು. ಪತ್ನಿ ಮಂಜುಳಾ ಜೆ ಅವರಿಗೆ ಪರಿಹಾರ ಲಭಿಸಬೇಕಿತ್ತು. ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ದಾಖಲೆಗಳ ಸಮೇತ ಅಧಿಕಾರಿಗಳಿಗೆ ಸಲ್ಲಿಸಿದ್ದರು. ಆದರೆ ಮೂಲ ದಾಖಲೆಗಳನ್ನು ನಕಲು ಮಾಡಿ ತಮಗೆ ಬರಬೇಕಿದ್ದ ಪರಿಹಾರವನ್ನು ಅವರ ಅತ್ತೆಗೆ ಬರುವಂತೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸಿಬ್ಬಂದಿಗಳು ಬದಲಾಯಿಸಿದ್ದಾರೆ ಎನ್ನುವುದು ಮಂಜುಳಾ.ಜೆ. ಆರೋಪ.
ಲೋಹಿತ್ ಜಿ.ಕೆ ಅವರು ಮೊದಲ ಕೊರೊನಾ ಅಲೆಯ ಸಂದರ್ಭ ರಿಮ್ಸ್ ಆಸ್ಪತ್ರೆಯಲ್ಲಿ ಸೀನಿಯರ್ ರಿಸರ್ಚ್ ಸೈನ್ಸಿಸ್ಟ್ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಇದಾದ ನಂತರ ಎರಡನೇ ಕೋವಿಡ್ ಅಲೆಯ ಸಂದರ್ಭದಲ್ಲಿ ಲೋಹಿತ್‌ಗೆ ಕೊರೊನಾ ಸೋಂಕು ತಗುಲಿದೆ. ಬಳಿಕ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿದೆ 2021ರ ಏ.26 ರಂದು ಮೃತಪಟ್ಟರು. ಇವರು ಮೃತಪಟ್ಟ ಸಂಬಂಧಪಟ್ಟವರಿಂದ ಪರಿಹಾರ ನಿಧಿ ಲಭ್ಯವಾಗುತ್ತದೆ ಎನ್ನುವ ಮಾಹಿತಿ ಗೊತ್ತಾಗಿದೆ. 2021 ಜೂನ್ 25ರಂದು ಮಹಿಳೆಯು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ನನ್ನ ಬಳಿಯಿದ್ದ ಒರಿಜಿನಲ್ ದಾಖಲೆಗಳನ್ನು ಪರಿಶೀಲನೆ ಮಾಡಿ, ಬಳಿಕ ಒಂದು ನಕಲು ಪ್ರತಿ ಪಡೆದುಕೊಂಡರು. ಬಳಿಕ ಒಂದು ತಿಂಗಳ ನಂತರ ಮತ್ತೆ ಕರೆ ಮಾಡಿ ಯಾವುದಾದರೂ ದಾಖಲೆಗಳು ಬಾಕಿ ಇದ್ದರೆ ಹೇಳಿ ಎಂದು ಕೇಳಿದ್ದೆ. ಅದಕ್ಕೆ ಅಧಿಕಾರಿಗಳು ಯಾವುದೇ ದಾಖಲೆಗಳು ಬಾಕಿ ಇಲ್ಲ, ಎಲ್ಲ ಸರಿಯಾಗಿದೆ ಎಂದು ತಿಳಿಸಿದ್ದರು.
ಈ ಬಗ್ಗೆ ಮೂರು ತಿಂಗಳಾದರೂ ಪ್ರತಿಕ್ರಿಯೆ ದೊರೆಯದಿದ್ದಾಗ ಆರ್‌ಟಿಐ ಮೂಲಕ ಪರಿಹಾರ ನಿಧಿಯ ಬಗ್ಗೆ ಮಾಹಿತಿ ಕೇಳಿದೆ. ಇದಕ್ಕೆ ಅವರು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಇಷ್ಟು ಮಾತ್ರವಲ್ಲದೆ 101 ದಿನಗಳ ಕಾಲ ನನ್ನ ಫೈಲ್ ಪೆಡಿಂಗ್ ಇಟ್ಟಿದ್ದು, ಈ ಬಗ್ಗೆ ಎರಡನೇ ಬಾರಿ ಆರ್‌ಟಿಐನಲ್ಲಿ ಕೇಳಿದಾಗ, ಮಾನವೀಯತೆ ದೃಷ್ಟಿಯಿಂದ ಒಂದು ಫಾರಂ ತುಂಬಿಲ್ಲದ ಕಾರಣ ಇಷ್ಟು ತಡವಾಗಲು ಕಾರಣವಾಗಿದೆ ಎಂದು ಉತ್ತರ ನೀಡಿದರು.
ನಾನು (ಮಂಜುಳಾ.ಜೆ) ಅರ್ಜಿ ಸಲ್ಲಿಸುವ ಒಂದು ದಿನ ಮುಂಚಿತವಾಗಿ ಲೋಹಿತ್ ತಂದೆ ಅರ್ಜಿ ಸಲ್ಲಿಸಿದ್ದಾರೆ. ಈ 101 ದಿನಗಳ ವಿಳಂಬದ ಸಂದರ್ಭದಲ್ಲಿ ನಾನು ಸಲ್ಲಿಸಿರುವ ದಾಖಲೆಗಳನ್ನು ಅವರು ನಕಲು ಮಾಡಿದ್ದಾರೆ. ಮಾವ ಸರ್ಕಾರಿ ನಿವೃತ್ತ ನೌಕರನಾಗಿರುವ ಕಾರಣ ಪರಿಹಾರ ಬರುವುದಿಲ್ಲ ಎನ್ನುವ ಕಾರಣಕ್ಕೆ ಅತ್ತೆಯ ಹೆಸರಿನಲ್ಲಿ ಮತ್ತೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಮಂಜುಳಾ ದೂರಿದ್ದಾರೆ. ಸದ್ಯ ನನ್ನ ಪತಿಯ ಪರಿಹಾರ ನಿಧಿಯನ್ನು ನ್ಯಾಯ ಸಮ್ಮತವಾಗಿ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : H D Kumaraswamy.. ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಆರಂಭ.. ಪ್ರತಿ ಹುದ್ದೆಗೂ ರೇಟ್ ಫಿಕ್ಸ್ ಆಗಿದೆ : ಕುಮಾರಸ್ವಾಮಿ ಆರೋಪ