ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈ ಕುರಿತು ವಿಡಿಯೋ ಮೂಲಕ ಮಾಹಿತಿ ನೀಡಿರುವ ಪ್ರತಾಪ್‌ಗೌಡ ಪಾಟೀಲ್, ನಾನು ಕೊರೊನಾ ತಪಾಸಣೆಗೆ ಒಳಗಾದಾಗ ವೈದ್ಯರು ಕೋವಿಡ್-19 ಸೋಂಕು ತಗುಲಿದೆ ಎಂದು ದೃಢಪಡಿಸಿದ್ದಾರೆ. ಹೀಗಾಗಿ ಹೋಂ ಕ್ವಾರಂಟೈನ್ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಸೋಂಕು ದೃಢಪಟ್ಟ ಕಾರಣ ನನ್ನನ್ನು ಯಾರೂ ಭೇಟಿ ಮಾಡಬೇಡಿ. ಪಕ್ಷದ ಪ್ರಮುಖರು, ನಾಯಕರು, ಕಾರ್ಯಕರ್ತರು, ಕುಟುಂಬಸ್ಥರು, ಅಪ್ತರು ನನ್ನ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ನಿಮ್ಮ ಹತ್ತಿರ ಬರಲು ಸಾಧ್ಯವಾಗದ ಕಾರಣ, ನನ್ನನ್ನು ಬೆಂಬಲಿಸಿ ಎಂದು ವಿಡಿಯೋ ಮೂಲಕವೇ ಮತಯಾಚನೆ ಮಾಡಿದ್ದಾರೆ.