ರಾಯಚೂರು: ಬಾಗಲವಾಡ ಗ್ರಾಮದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಜಿಲ್ಲೆಯ ಮಾನವಿ ತಾಲೂಕಿನ ಬಾಗಲವಾಡ ಗ್ರಾಮದ ಈ ಮಹಿಳೆ ಸರ್ಕಾರಿ ಆಸ್ಪತ್ರೆಗೆ ಜೂ.25ರಂದು ಚಿಕಿತ್ಸೆಗೆ ಬಂದಾಗ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಪರೀಕ್ಷೆ ವರದಿ ನಿನ್ನೆ ಬಂದಿದೆ, ಮಹಿಳೆಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಚಿಕಿತ್ಸೆಗೆಂದು ಓಪೆಕ್ ಆಸ್ಪತ್ರೆಗೆ ರವಾನಿಸಲಾಗಿದೆ.
ಗರ್ಭಿಣಿಯಾಗಿದ್ದ ಈ ಮಹಿಳೆಗೆ ಬ್ಯಾಗವಾಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿಸಲಾಗಿತ್ತು. ಸಾಮಾನ್ಯವಾಗಿ 9 ತಿಂಗಳಲ್ಲಿ ಗರ್ಭಿಣಿಯರಿಗೆ ಹೆರಿಗೆ ಆಗುವುದು. ಆದ್ರೆ ಈ ಮಹಿಳೆಗೆ 7 ತಿಂಗಳಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಹೆರಿಗೆ ವೇಳೆ ಮಗು ಸಾವನಪ್ಪಿದೆ.
ಮಹಿಳೆಗೆ ಸೋಂಕು ದೃಢಪಟ್ಟ ಹಿನ್ನೆಲೆ, ಮಹಿಳೆಗೆ ಹೆರಿಗೆ ಮಾಡಿಸಿದ ಸಿಬ್ಬಂದಿ ಮತ್ತು ವೈದ್ಯರ ಗಂಟಲು ದ್ರವವನ್ನು ಸಂಗ್ರಹಿಸಿ, ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಜೊತೆಗೆ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಇನ್ನೂ ಆಸ್ಪತ್ರೆಯನ್ನು ಸಹ ಸ್ಯಾನಿಟೈಸರ್ ಮಾಡಿ, ಸೀಲ್ ಡೌನ್ ಮಾಡಲಾಗಿದೆ. ಈ ಘಟನೆಯಿಂದ ಬ್ಯಾಗವಾಟ ಗ್ರಾಮದ ಜನರಿಗೆ ಸಹ ಕೊರೊನಾ ಭೀತಿ ಶುರುವಾಗಿದೆ.