ರಾಯಚೂರು: ಕೊರೊನಾ ಸೋಂಕಿನ ಭೀತಿಯಿಂದಾಗಿ ಜಿಲ್ಲೆಯ ಗುರ್ಜಾಪುರ ಗ್ರಾಮಸ್ಥರು ಪರಿಹಾರ ಕೇಂದ್ರಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ.
ನಾರಾಯಣಪುರ ಜಲಾಶಯದಿಂದ 1.80 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಯಬಿಡಲಾಗಿದೆ. ಹೀಗಾಗಿ, ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿದೆ. ಭೀಮಾ ನದಿ ನೀರು ಹೆಚ್ಚಾಗಿರುವುದರಿಂದ ಗುರ್ಜಾಪುರ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿ ಯದ್ಲಾಪುರ ಪ್ರೌಢಶಾಲೆಯಲ್ಲಿ ಇರಿಸಲು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿಕೊಟ್ಟಿದೆ. ಆದ್ರೆ, ಗ್ರಾಮಸ್ಥರು ಕೊರೊನಾ ಭೀತಿಯಿಂದ ಹಿಂದೆಮುಂದೆ ನೋಡುತ್ತಿದ್ದಾರೆ. ಅಲ್ಲದೇ, ಗುರ್ಜಾಪುರ ಗ್ರಾಮ ಶಾಶ್ವತವಾಗಿ ಸ್ಥಳಾಂತರಿಸಲು ಒತ್ತಾಯವಿದ್ದರೂ, ಅವೈಜ್ಞಾನಿಕವಾಗಿ ಆಸರೆ ಮನೆಗಳ ನಿರ್ಮಾಣದಿಂದ ಜನ ಭೀತಿಗೆ ಸಿಲುಕಿದ್ದಾರೆ.
ಜನರನ್ನು ಸುರಕ್ಷಿತವಾಗಿ ಪರಿಹಾರ ಕೇಂದ್ರಗಳಿಗೆ ತಲುಪಿಸಲು ಜಿಲ್ಲಾಡಳಿತ ಮುಂದಾಗಿದ್ದರೂ, ಕೊರೊನಾ ಭೀತಿಯಿಂದಾಗಿ ಪರಿಹಾರ ಕೇಂದ್ರಕ್ಕೆ ಹೋಗಲ್ಲ, ಬದಲಾಗಿ ತಮ್ಮ ಹೊಲಗಳಿಗೆ, ಸಂಬಂಧಿಕರ ಮನೆಗಳಿಗೆ ತೆರಳುವುದಾಗಿ ಹೇಳುತ್ತಿದ್ದಾರೆ.