ರಾಯಚೂರು: ಜಗತ್ತನ್ನೇ ಭಯಭೀತಗೊಳಿಸಿದ ಕೊರೊನಾ ವೈರಸ್ ಕೆಂಗಣ್ಣು ಇದೀಗ ಔಷಧ ಸಾಮಾಗ್ರಿ ಉತ್ಪಾದಿಸುವ ಕಂಪನಿಗಳ ಮೇಲೆ ಬಿದ್ದಿದೆ.
ದೇಶ,ವಿದೇಶಗಳಿಗೆ ಔಷಧಗಳನ್ನು ರಫ್ತು ಮಾಡುವ ಜಿಲ್ಲೆಯ ಶಿಲ್ಪಾ ಮೆಡಿಕೇರ್ ಕಂಪನಿಯಲ್ಲಿ ಉತ್ಪಾದನೆಯಲ್ಲಿ ಕುಸಿತ ಕಂಡಿದೆ. ಪರಿಣಾಮ, ಆರ್ಥಿಕ ನಷ್ಟ ಎದುರಿಸುವಂತಹ ಪರಿಸ್ಥಿತಿ ಉದ್ಭವಿಸಿದೆ. ಆದ್ರೆ ಔಷಧಿ ಉತ್ಪಾದನೆ ಅಗತ್ಯ ಇರುವುದರಿಂದ ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗುವುದಿಲ್ಲ. ಉತ್ಪಾದನೆ ಇಳಿಮುಖವಾದರೂ ಸಹ ಔಷಧಿಯನ್ನು ತಯಾರಿಸುವ ಅವಶ್ಯಕತೆ ಇರುವುದರಿಂದ ಉತ್ಪಾದನೆ ಕುಸಿತದ ನಡುವೆಯೂ ಔಷಧ ತಯಾರಿಕೆ ನಡೆಯುತ್ತಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ವೈರಸ್ ಹರಡುವಿಕೆ ಕಾರಣದಿಂದ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಆರೋಗ್ಯದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಶೇ 50ರಷ್ಟು ಮೇಲ್ಪಟ್ಟ ವಯಸ್ಸಿನವರಿಗೆ ವಿನಾಯಿತಿ ನೀಡಲಾಗಿದೆ. ಕೆಲಸಕ್ಕೆ ಬರುವ ಸಿಬ್ಬಂದಿಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.
ಆಸ್ಟ್ರೇಲಿಯಾ, ಅಮೆರಿಕ, ಯೂರೋಪ್ ಸೇರಿದಂತೆ ನಾನಾ ಕಡೆ ಶಾಖೆಗಳನ್ನು ಹೊಂದಿರುವ ಆಯಾ ರಾಷ್ಟ್ರಗಳಲ್ಲಿ ಉತ್ಪಾದನೆ ಸ್ಥಗಿತಗೊಳಿಸದಂತೆ ಹೇಳಿದೆ. ಅದೇ ರೀತಿ ಭಾರತವೂ ಗಂಭೀರ ಸಮಸ್ಯೆ ಎದುರಿಸುತ್ತಿರುವ ಕಾರಣ ಫಾರ್ಮಸಿ ಕಂಪನಿಗಳಿಗೆ ಉತ್ಪಾದನೆ ನಿಲ್ಲಿಸದಂತೆ ನೋಟಿಸ್ ನೀಡಲಾಗಿದೆ.