ರಾಯಚೂರು: ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಯೋಜನೆಗಳ ಅನುಷ್ಠಾನ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಇ.ಒ ಪಂಪಾಪತಿ ಹಿರೇಮಠ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳ ತುರ್ತು ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ತುರ್ತು ಕ್ರಮ ಕೈಗೊಳ್ಳಬೇಕು. ತೆರೆದಬಾವಿ ನೀರು ಬಳಸುತ್ತಿದ್ದರೆ ಅಗತ್ಯ ರಾಸಾಯನಿಕ ಬಳಸಿ ಪೂರೈಸಬೇಕು. ಕೊರೊನಾ ವೈರಸ್ ತಡೆಗೆ ತಾಲೂಕು ಆಡಳಿತ ನೀಡಿದ ಸಲಹೆ ಸೂಚನೆ ಪಾಲನೆ ಮಾಡಬೇಕು. ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧ ಮಾಡಲಾಗಿದೆ.
ಅಂಗಡಿ ಮುಂಗಟ್ಟು ಬಂದ್ ಮಾಡಿ ಗ್ರಾಮಕ್ಕೆ ಹೊಸಬರು ಬಂದರೆ ಮಾಹಿತಿ ನೀಡಬೇಕು. ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಿ. ಉಳಿದ ಯೋಜನೆಗಳ ಅನುಷ್ಠಾನ ತುರ್ತಾಗಿ ನಿರ್ವಹಿಸಬೇಕು. ಇಲ್ಲದೇ ಹೋದರೆ ತಮ್ಮ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.