ರಾಯಚೂರು: ಎಪಿಎಂಸಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿ, ಸುಗ್ರೀವಾಜ್ಞೆ ಹೊರಡಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸರ್ಕಾರಗಳ ಕಾಯ್ದೆ ತಿದ್ದುಪಡಿಯಿಂದ ರೈತ ಸಮುದಾಯ ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇನ್ನೂ ಮುಂಗಾರು ಹಂಗಾಮಿಗೆ ರೈತರ ಕೃಷಿ ಚಟುವಟಿಕೆಗೆ ಬಳಸುವ ಯೂರಿಯಾ ಗೊಬ್ಬರ ಕೂಡಾ ಸಮರ್ಪಕವಾಗಿ ಸರ್ಕಾರ ಪೂರೈಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು. ಮುಖ್ಯವಾಗಿ ಜಿಲ್ಲೆಯ ರೈತರಿಗೆ ಅಗತ್ಯವಿರುವ ರಸಗೊಬ್ಬರವನ್ನು ಕೂಡಲೇ ಒದಗಿಸಬೇಕು ಎಂದು ಒತ್ತಾಯಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್, ಶಾಸಕ ಬಸವನಗೌಡ ದದ್ದಲ್, ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಮುಖಂಡರಾದ ರುದ್ರಪ್ಪ ಅಂಗಡಿ, ಶಾಂತಪ್ಪ, ಅಮರೇಗೌಡ ಹಂಚಿನಾಳ, ತಿಮ್ಮಾರೆಡ್ಡಿ, ಮಹಿಳಾ ಮುಖಂಡರಾದ ನಿರ್ಮಲಾ ಬೆಣ್ಣೆ, ಆದೋನಿ ಮಂಜುಳಾ, ಶಶಿಕಲಾ ಭೀಮರಾಯ ಸೇರಿದಂತೆ ಅನೇಕ ಮುಖಂಡರು, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.