ಲಿಂಗಸುಗೂರು : ವಿಧಾನಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಮುಕ್ತ ಲಿಂಗಸುಗೂರು ನಿಶ್ಚಿತ ಎಂದು ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಶಂಕರಗೌಡ ಬಳಗಾನೂರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡವರನ್ನು ಸ್ವಾಗತಿಸಿ ಮಾತನಾಡಿದ ಅವರು, ಇದು ಗ್ರಾಮ ಪಂಚಾಯತ್ ಚುನಾವಣೆ ನಂತರದ ಹೊಸ ವರ್ಷದ ಕೊಡುಗೆಯಾಗಿದೆ. ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ನ ಶೇ 50 ರಷ್ಟು ಮುಖಂಡರು ಬಿಜೆಪಿ ಸೇರಲಿದ್ದಾರೆ. ವಿಧಾನಸಭೆ ಚುನಾವಣೆ ಬರುವಷ್ಟರಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಪೂರ್ಣ ನಿರ್ನಾಮವಾಗಲಿದೆ ಎಂದರು.
ಓದಿ : ಚುನಾವಣೆ ಕದನ ಮುಗಿದರೂ ಹಳ್ಳಿಗರ ಫೈಟ್ ನಿಂತಿಲ್ಲ : ಸೋತವರು-ಗೆದ್ದವರ ಮಧ್ಯೆ ಮಾರಾಮಾರಿ
ಈಗಾಗಲೇ ಶೇ 80ರಷ್ಟು ಕಾಂಗ್ರೆಸ್ ಮುಖಂಡರು ಪರೋಕ್ಷವಾಗಿ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ನಾವೇ ಕಾದು ನೋಡೋಣ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಜೆಡಿಎಸ್ ಈಗಾಗಲೇ ತೆರೆಮರೆಗೆ ಸರಿದು ಹೋಗಿದೆ. ಕ್ಷೇತ್ರದಲ್ಲಿ ನಾವು 20 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ಗಳ ಚುಕ್ಕಾಣಿ ಹಿಡಿಯುತ್ತೇವೆ ಎಂದು ಹೇಳಿದರು.