ರಾಯಚೂರು: ಹಿಜಾಬ್ ವಿವಾದದ ಮೂಲಕ ಮುಸ್ಲಿಂ ಸಮುದಾಯದ ವೋಟು ಪಡೆಯುವ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗುವ ಕನಸಿನ ಲೋಕದಲ್ಲಿದ್ದಾರೆ. ಹಿಜಾಬ್ ವಿವಾದದಿಂದ ಮುಸ್ಲಿಂ ವೋಟು ಪಡೆಯುವ ಭ್ರಮೆಯಲ್ಲಿದ್ದಾರೆ. ಯು.ಟಿ.ಖಾದರ್ ಹಾಗೂ ಕೆಲವು ಶಾಸಕರು ಹಿಜಾಬ್ ವಿವಾದದ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಹಿಜಾಬ್ ವಿವಾದದಲ್ಲಿ ಎಸ್ಡಿಪಿಐ, ಪಿಎಫ್ಐ ಕೈವಾಡವಿದ್ದು, ಕ್ರಮ ಕೈಗೊಳ್ಳಿ ಎಂದು ಕೂಡ ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಹಿಜಾಬ್ ಪರ ಮಾತನಾಡುತ್ತಿದ್ದು, ಕಾಂಗ್ರೆಸ್ನಲ್ಲಿ ಎರಡು ಗುಂಪುಗಳಿವೆ. ಗೋವಾದಲ್ಲಿ ಕರ್ನಾಟಕಕ್ಕೆ ಹನಿ ನೀರು ಕೊಡಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ, ಇಲ್ಲಿ ಮಹಾದಾಯಿ, ಮೇಕೆದಾಟು ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಹೋರಾಟ ನಡೆಸುತ್ತಿದ್ದಾರೆ. ಕೆಲಸವಿಲ್ಲದೇ ಕಾಂಗ್ರೆಸ್ ನವರು ಪಾದಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ಒಂದು ಹಂತದ ಹೋರಾಟ ಮಾಡಿದ್ದಾಗಿ ಹೇಳಿದ್ದಾರೆ. ಈಗ ಮತ್ತೆ ಮೇಕೆದಾಟು- 2 ಎಂದು ನಾಟಕ ಶುರು ಮಾಡಿದ್ದು, ಬಾಹುಬಲಿ 1 ಅಂಡ್ 2 ರೀತಿ ಪ್ರಾರಂಭ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ರಾಜಕೀಯ ದ್ವೇಷದಿಂದ ಎಫ್ಐಆರ್ ದಾಖಲು ಮಾಡಿದ್ದಾರೆ : ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ
ಹರ್ಷ ಕುಟುಂಬಸ್ಥರಿಗೆ ಶಿವಮೊಗ್ಗದಲ್ಲಿ ಬಿಜೆಪಿ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಎಂಎಲ್ಸಿ ಹರಿಪ್ರಸಾದ್ಗೆ ಟಾಂಗ್ ನೀಡಿದ ಕೆ.ಎಸ್. ಈಶ್ವರಪ್ಪ, ಹಿಂದೂಗೆ ನಾನು ನನ್ನ ಟಿಕೆಟ್ ಬಿಟ್ಟು ಕೊಡಲು ರೆಡಿ ಇದ್ದೇನೆ. ಮುಸ್ಲಿಮರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಬಿಟ್ಟುಕೊಡುವುದಿಲ್ಲ. ನಮ್ಮ ಪಕ್ಷ ಹೇಳಿದ್ರೆ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಅದೇ ಹರಿಪ್ರಸಾದ್ ತನ್ನ ವಿರೋಧ ಪಕ್ಷದ ನಾಯಕ ಸ್ಥಾನ ಸಿಎಂ ಇಬ್ರಾಹಿಂಗೆ ಬಿಟ್ಟು ಕೊಡ್ತಾನಾ ಎಂದು ಪ್ರಶ್ನಿಸಿದರು.