ರಾಯಚೂರು: ಬಿಸಿಲೂರು ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 4, ಬಿಜೆಪಿ 2, ಜೆಡಿಎಸ್ 1 ಸ್ಥಾನ ಗಳಿಸಿದೆ. ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಶಿವರಾಜ್ ಪಾಟೀಲ್ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದಾರೆ.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಬಸವನಗೌಡ ದದ್ದಲ್ ಸತತ ಎರಡನೇ ಬಾರಿ ಗೆಲುವು ಸಾಧಿಸಿದ್ದರೆ, ಮಾನವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಹಂಪಯ್ಯ ನಾಯಕ ಗೆದ್ದರು. ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಹಂಪನಗೌಡ ಬಾದರ್ಲಿ ಗೆಲುವು ಕಂಡರೆ, ಮಸ್ಕಿಯಲ್ಲಿ ಕೈ ಅಭ್ಯರ್ಥಿ ಬಸವನಗೌಡ ತುರುವಿಹಾಳ, ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಗೆಲುವು ಸಾಧಿಸಿದರು. ದೇವದುರ್ಗ ಕ್ಷೇತ್ರದಲ್ಲಿ ಕರೆಮ್ಮ ನಾಯಕ ಜಯಭೇರಿ ಬಾರಿಸಿದ್ದಾರೆ. ರಾಯಚೂರು ನಗರದಲ್ಲಿ ಇದುವರೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸತತವಾಗಿ ಮೂರು ಬಾರಿ ಯಾರೂ ಶಾಸಕರಾಗಿ ಆಯ್ಕೆಯಾಗಿರಲಿಲ್ಲ. ಆದರೆ, ಡಾ.ಶಿವರಾಜ್ ಪಾಟೀಲ್ ಇಂದು ಹ್ಯಾಟ್ರಿಕ್ ವಿಜಯದ ಮೂಲಕ ಹೊಸ ದಾಖಲೆ ಸೃಷ್ಠಿಸಿದ್ದಾರೆ.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಾರಿ ಪೈಪೋಟಿ ನಡೆದಿತ್ತು. ಇದುವರೆಗೆ ಕ್ಷೇತ್ರದಲ್ಲಿ ನಡೆದಂತಹ ಚುನಾವಣೆಯಲ್ಲಿ ಒಂದು ಬಾರಿ ಗೆದ್ದ ಅಭ್ಯರ್ಥಿ ಮತ್ತೊಮ್ಮೆ ಗೆಲುವು ಸಾಧಿಸುವುದಿಲ್ಲ ಎನ್ನುವ ಮಾತಿತ್ತು. ಆದರೆ ಇಂದು ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ ವಿರುದ್ಧ ಸತತ ಎರಡು ಬಾರಿ ಗೆಲುವು ಸಾಧಿಸಿ ಹೊಸ ದಾಖಲೆ ಬರೆದರು.
ಕಾಂಗ್ರೆಸ್ ಜಿ.ಹಂಪಯ್ಯ ನಾಯಕ ಜಯಭೇರಿ: ಮಾನವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವಿ.ನಾಯಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಹಂಪಯ್ಯ ನಾಯಕ, ಜೆಡಿಎಸ್ ಅಭ್ಯರ್ಥಿ ಮತ್ತು ಹಾಲಿ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಈ ಮೂವರು ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ನ ಜಿ.ಹಂಪಯ್ಯ ನಾಯಕ ಜಯಭೇರಿ ಬಾರಿಸಿದರು.
ಸಿಂಧನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ, ಬಿಜೆಪಿ ಅಭ್ಯರ್ಥಿ ಕೆ.ಕರಿಯಪ್ಪ ಹಾಗೂ ಜೆಡಿಎಸ್ ಅಭ್ಯರ್ಥಿ ಮತ್ತು ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಮಧ್ಯ ತ್ರಿಕೋನ ಸ್ಪರ್ಧೆ ನಡೆದಿತ್ತು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಸಿಂಧನೂರು ಬಿಜೆಪಿ ಅಭ್ಯರ್ಥಿ ಪರವಾಗಿ ಆಗಮಿಸಿ ಪ್ರಚಾರ ನಡೆಸಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಆರ್.ಬಸವನಗೌಡ ಗೆಲುವು: ಮೋದಿ ಭೇಟಿ ನೀಡಿದ ಬಳಿಕವೂ ಸಹ ಸಿಂಧನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರಾಭವಗೊಂಡು, ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ ಜಯಗಳಿಸಿದ್ದಾರೆ. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಆರ್. ಬಸವನಗೌಡ ತುರುವಿಹಾಳ ನಡುವೆ ಪೈಪೋಟಿ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಡದರು.
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರಾನೇರ ಸ್ಪರ್ಧೆ ಇತ್ತು. ಬಿಜೆಪಿಯಿಂದ ಹಾಲಿ ಶಾಸಕ ಕೆ. ಶಿವನಗೌಡ ನಾಯಕ ಮತ್ತು ಜೆಡಿಎಸ್‌ನಿಂದ ಕರೆಮ್ಮ ನಾಯಕ ನಡುವೆ ಸ್ಪರ್ಧೆ ನಡೆದಿತ್ತು. ಅಂತಿಮವಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮತಗಳನ್ನು ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ ಪಡೆಯುವ ಮೂಲಕ ಹಾಲಿ ಶಾಸಕರಿಗೆ ಹೀನಾಯ ಸೋಲಿನ ರುಚಿ ತೋರಿಸಿದ್ದಾರೆ.
ಬಿಜೆಪಿ ಮಾನಪ್ಪ ವಜ್ಜಲ್ ಗೆಲುವು: ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್, ಜೆಡಿಎಸ್ ಅಭ್ಯರ್ಥಿ ಸಿದ್ದು ವೈ.ಬಂಡಿ ಹಾಗೂ ಕಾಂಗ್ರೆಸ್ ಡಿ.ಎಸ್.ಹೂಲಗೇರಿ ಮಧ್ಯೆ ತ್ರಿಕೋನ ಸೆಣಸಾಟ ನಡೆದಿತ್ತು. ಅಂತಿಮವಾಗಿ ವಜ್ಜಲ್ ಗೆಲುವು ಸಾಧಿಸಿದ್ದಾರೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಹೆಚ್ಚಿನ ಸ್ಥಾನ ಗಳಿಸಿದರೆ, ಬಿಜೆಪಿ ಎರಡು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. ಜೆಡಿಎಸ್ 1 ಸ್ಥಾನಕ್ಕೆ ಸೀಮಿತವಾಗಿದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ 3 ಕಾಂಗ್ರೆಸ್, 1 ಜೆಡಿಎಸ್: ಗೆದ್ದ ನಾಲ್ವರು ಅಭ್ಯರ್ಥಿಗಳು ಹೇಳುವುದೇನು ?