ಸಂತೆಕೆಲ್ಲೂರು(ರಾಯಚೂರು): ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕೆಲ್ಲೂರ ಗ್ರಾ.ಪಂ.ಯ ಉದ್ಯೋಗ ಖಾತ್ರಿಯಲ್ಲಿ ಹಣ ದುರ್ಬಳಕೆ ಯತ್ನ ನಡೆದಿದ್ದು, ಕೂಡಲೇ ತನಿಖೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ದೂರು ಸಲ್ಲಿಸಿದೆ.
ಉಪ ವಿಭಾಗಾಧಿಕಾರಿ ಕಚೇರಿಗೆ ದೂರು ಸಲ್ಲಿಸಿದ ಸಮಿತಿ ಸದಸ್ಯರು, ಸಂತೆಕೆಲ್ಲೂರಲ್ಲಿ ವಸತಿ ನಿಲಯದ ಕಂಪೌಂಡಿನ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಯೋವೃದ್ಧರ ಹೆಸರಲ್ಲಿ ಎನ್ಎಂಆರ್ ಸೃಷ್ಟಿಸಿ ಹಣ ದುರ್ಬಳಕೆಗೆ ದಾಖಲೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೆಲಸಕ್ಕೆ ಹೋಗದ ಕೆಲವರ ಹೆಸರಲ್ಲಿ ನಕಲಿ ಜಾಬ್ ಕಾರ್ಡ್ ಸಿದ್ಧಪಡಿಸಿದ್ದು, ಕ್ರಿಯಾ ಯೋಜನೆಗೂ ವಾಸ್ತವ ಕಾಮಗಾರಿಗೂ ಸಾಮ್ಯತೆ ಇಲ್ಲ. ವಾಸ್ತವವಾಗಿ ಕಡಿಮೆ ಅಳತೆ ಹೊಂದಿದೆ. ಈ ಕುರಿತು ತಾ.ಪಂ. ಅಧಿಕಾರಿಗೆ ದೂರು ಸಲ್ಲಿಸಿದರು ಮೌನ ವಹಿಸಿದ್ದಾರೆ ಎಂದು ದೂರಿದರು.