ರಾಯಚೂರು: ಜಿಲ್ಲೆಯ ಕರೆಗುಡ್ಡ ಗ್ರಾಮದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಕೈಗೊಳ್ಳಲಿರುವ ಹಿನ್ನೆಲೆ ಗ್ರಾಮದಲ್ಲಿನ ಸಮಸ್ಯೆ ಮತ್ತು ವಾಸ್ತವ್ಯ ಮಾಡುವ ಸ್ಥಳವನ್ನ ಜಿಲ್ಲಾ ಉಸ್ತುವರಿ ಸಚಿವ, ಸ್ಥಳೀಯ ಶಾಸಕರು, ಅಧಿಕಾರಿಗಳು ಪರಿಶೀಲನೆ ನಡೆಸಿದ್ರು.
ಇದೇ ಜೂನ್ 28ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಇದಕ್ಕಾಗಿ ಜಿಲ್ಲೆಯ ಮಾನ್ವಿ ತಾಲೂಕಿನ ಕರೆಗುಡ್ಡ ಗ್ರಾಮವನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಸಮಸ್ಯಾತ್ಮಕ ಮತ್ತು ಕುಗ್ರಾಮ ಆಯ್ಕೆ ಮಾಡಿಕೊಂಡು ವಾಸ್ತವ್ಯ ಮಾಡಿಕೊಳ್ಳುವ ಪರಿಕಲ್ಪನೆ ಹಿನ್ನೆಲೆ ರಾಯಚೂರಿನ ಕರೆಗುಡ್ಡ ಗ್ರಾಮವನ್ನು ಆರಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಸಿಇಒ ನಲೀನ್ ಆತುಲ್ ಹಾಗೂ ಅಧಿಕಾರಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಇನ್ನು ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಅಲ್ಲಿನ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಗ್ರಾಮದಲ್ಲಿನ ಸಮಸ್ಯೆ, ಆಗಬೇಕಾದ ಕೆಲಸಗಳು, ಗ್ರಾಮಸ್ಥರ ಬೇಡಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿ, ಬಳಿಕ ಸಿಎಂ ತಂಗುವ ಶಾಲೆ, ಕಾರ್ಯಕ್ರಮ ಸ್ಥಳ ಪರಿಶೀಲನೆ ನಡೆಸಿದ್ರು. ಈ ವೇಳೆ ಮಾತನಾಡಿದ ಸ್ಥಳೀಯ ಶಾಸಕರು, ಸಿಎಂ ನಮ್ಮ ಕ್ಷೇತ್ರದ ಗ್ರಾಮವನ್ನ ಆಯ್ಕೆ ಮಾಡಿಕೊಂಡಿರುವುದು ಸಂತಸ ತಂದಿದೆ. ಗ್ರಾಮವನ್ನ ಅಭಿವೃದ್ಧಿ ಹೊಂದುವುದರ ಜತೆಗೆ ಕ್ಷೇತ್ರದಲ್ಲಿನ ಆಗಬೇಕಾದ ಕಾರ್ಯಗಳ ಬಗ್ಗೆ ಗಮನಕ್ಕೆ ತಂದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು. ಒಟ್ಟಿನಲ್ಲಿ ತೀರ ಹಿಂದುಳಿದ ರಾಯಚೂರು ಜಿಲ್ಲೆ ಕರೆಗುಡ್ಡ ಗ್ರಾಮದಲ್ಲಿ ಸಿಎಂ ವಾಸ್ತವ್ಯ ಮಾಡಲಿದ್ದು, ಇದರಿಂದ ಕರೆಗುಡ್ಡ ಮತ್ತು ಜಿಲ್ಲೆಗೆ ಎಷ್ಟರ ಮಟ್ಟಿಗೆ ಪ್ರಯೋಜನವಾಗಲಿದೆ ಎನ್ನುವುದು ಕಾದು ನೋಡಬೇಕಾಗಿದೆ.