ರಾಯಚೂರು: "ನಾನು ಅಯೋಧ್ಯೆಗೆ ಹೋಗುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ತಿಂಥಿಣಿಯ ಕಾಗಿನೆಲೆ ಕನಕ ಗುರುಪೀಠದಲ್ಲಿ ನಡೆಯುತ್ತಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರು ರಾಮಮಂದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆ ಮಾಡುವುದಕ್ಕೆ ನಮ್ಮದೇನೂ ವಿರೋಧ ಇಲ್ಲ. 22ರಂದು ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದಾರೆ, ಇದು ಸರಿಯಲ್ಲ" ಎಂದರು.
"ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿರುವುದನ್ನು ವಿರೋಧ ಮಾಡುತ್ತೇವೆಯೇ ಹೊರತು ಶ್ರೀರಾಮಚಂದ್ರ, ರಾಮಮಂದಿರವನ್ನಾಗಲಿ ನಾವು ವಿರೋಧ ಮಾಡಲ್ಲ. ನಾನು ಅಯೋಧ್ಯೆಗೆ ಹೋಗಲ್ಲ ಎಂದೂ ಹೇಳಿಲ್ಲ. ಹೋಗುತ್ತೇನೆ ಎಂದೂ ಹೇಳಿಲ್ಲ" ಎಂದು ಹೇಳಿದರು.
"ಕಾಂಗ್ರೆಸ್ ಪಕ್ಷ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದು, ಒಂದು ಧರ್ಮ, ಒಂದು ಜಾತಿಯ ಪರವಾಗಿರಲು ನಾವು ಬಿಜೆಪಿ ಅಲ್ಲ. ನಾವು ಎಲ್ಲ ಧರ್ಮ, ಎಲ್ಲ ಜಾತಿಯವರ ಪರವಾಗಿ ಇರುವವರು. ನಾವು ಧರ್ಮದ ಆಧಾರದ ಮೇಲೆ ಸಮಜ ಒಡೆಯುವವರಲ್ಲ. ನಾವು ಜಾತ್ಯತೀತ ತತ್ವ ಹಾಗೂ ಧರ್ಮನಿರಪೇಕ್ಷತೆಯಲ್ಲಿ ನಂಬಿಕೆಯುಳ್ಳವರು. ಕಾಂಗ್ರೆಸ್ ಜಾತ್ಯತೀತ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು" ಎಂದರು.
ಪ್ರತಾಪ ಸಿಂಹಗೆ ಸೋಲಿನ ಭೀತಿ ಶುರುವಾಗಿದೆ: "ಶಾಸಕ ಯತೀಂದ್ರ ಅವರನ್ನು ಕೊಡಗು ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿಸುವುದಾಗಿ ನಾನಾಗಲಿ ಬೇರೆ ಯಾರಾದರೂ ಹೇಳಿದ್ದಾರಾ?. ಸಂಸದ ಪ್ರತಾಪ ಸಿಂಹಗೆ ಸೋಲಿನ ಭೀತಿ ಶುರುವಾಗಿದೆ. ಹೀಗಾಗಿ ಅವರಿಗೆ ಚಡಪಡಿಕೆ ಶುರುವಾಗಿದೆ. ಭೈರತಿ ಸುರೇಶ ವೀಕ್ಷಕರಾಗಿ ಹೋಗಿದ್ದು, ಅವರು ವರದಿ ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕ್ಷೇತ್ರದಲ್ಲಿ ಶಾಸಕರು, ಮಾಜಿ ಶಾಸಕರು, ಸಂಸದರು, ಅಭ್ಯರ್ಥಿ ಆಗಿದ್ದವರು, ಬ್ಲಾಕ್ ಸಮಿತಿ ಅಧ್ಯಕ್ಷ, ಜಿಲ್ಲಾಧ್ಯಕ್ಷರು, ಪ್ರಮುಖ ಕಾರ್ಯಕರ್ತರ ಅಭಿಪ್ರಾಯ ಪಡೆದು ಅವರು ಹೇಳಿದವರಿಗೆ ಲೋಕಸಭೆ ಟಿಕೆಟ್ ನೀಡಲಾಗುವುದು" ಎಂದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಗೃಹ ಲಕ್ಷ್ಮಿ ಯೋಜನೆಯಡಿ ಕೊಡುವ 2000 ರೂ.ಯಾವುದಕ್ಕೂ ಸಾಲುವುದಿಲ್ಲ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಅವರು ನೂರು ರೂಪಾಯಿಯನ್ನೂ ಕೊಟ್ಟಿಲ್ಲ" ಎಂದು ತಿರುಗೇಟು ನೀಡಿದರು.
ಮತ್ತೊಂದೆಡೆ, ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾತನಾಡಿ, "ರಾಮಮಂದಿರ ವಿಚಾರದಲ್ಲಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬ ಭಯ ಕಾಂಗ್ರೆಸ್ ನವರಿಗೆ ಕಾಡುತ್ತಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮಮಂದಿರ ವಿಚಾರದಲ್ಲಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬ ಭಯ ಕಾಂಗ್ರೆಸ್ಗೆ ಕಾಡುತ್ತಿದೆ: ಬಿಎಸ್ವೈ