ರಾಯಚೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಒಂದು ಗಾಸಿಪ್ ಅಷ್ಟೇ ಎಂದು ಬಿಜೆಪಿ ಎಂಎಲ್‌ಸಿ ಕೆ.ಪಿ. ನಂಜುಡಿ ಹೇಳಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೇಳಿ ಬರುತ್ತಿರುವ ಸಿಎಂ ಬೊಮ್ಮಾಯಿ ಬದಲಾವಣೆ ವಿಚಾರ ಕುರಿತು ಪ್ರಕ್ರಿಯೆ ನೀಡಿದರು.
ಮುಖ್ಯಮಂತ್ರಿ ಬೊಮ್ಮಾಯಿಯವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಅವಧಿ ಮುಗಿಯುವವರೆಗೂ ಸಿಎಂ ಬದಲಾವಣೆ ಇಲ್ಲ. ಸಿಎಂ ಬದಲಾವಣೆ ಹೇಳಿಕೆಯೂ ಕೇವಲ ಬಾಯಿಚಪಲ ಇದ್ದಂತೆ ಎಂದರು.
ಹೈಕಮಾಂಡ್ ಅವಕಾಶ ಕೊಟ್ಟರೆ ನಾವೂ ಜನರನ್ನು ಸೇರಿಸುತ್ತೇವೆ: ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ವಿಚಾರದ ಪ್ರಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದು ಸಿದ್ದರಾಮಯ್ಯ ಅಭಿಮಾನಿಗಳು ಅಲ್ಲ, ಇಡೀ ಪಕ್ಷ. 224 ಕ್ಷೇತ್ರದ ದೊಡ್ಡ ದೊಡ್ಡ ನಾಯಕರು ಹುಟ್ಟುಹಬ್ಬ ಕಾರ್ಯಕ್ರಮದ ಸಮಿತಿಯಲ್ಲಿ ಇದ್ದರು.
ಕೇವಲ ಅಭಿಮಾನಿಗಳು ಆಯೋಜನೆ ಮಾಡುತ್ತಿದ್ದರೆ ಇಷ್ಟು ಜನ ಸೇರುತ್ತಿರಲಿಲ್ಲ. ಎಲ್ಲರೂ ಸೇರಿ ಸಿದ್ದರಾಮಯ್ಯ ಹುಟ್ಟುಹಬ್ಬ ಮಾಡಿದ್ದಾರೆ ಅಷ್ಟು ಜನ ಸೇರುವುದು ದೊಡ್ಡ ವಿಷಯವೇ ಅಲ್ಲ. ಸರಿಯಾಗಿ ನೋಡಿದರೆ ಅದು ಕಡಿಮೆಯೇ. ಹೈಕಮಾಂಡ್ ಅವಕಾಶ ಕೊಟ್ಟರೇ ನಾವೂ ಜನರನ್ನು ಸೇರಿಸುತ್ತೇವೆ. ಸಿದ್ದರಾಮೋತ್ಸವಕ್ಕಿಂತಲೂ ಹೆಚ್ಚು ಜನರನ್ನು ನಾವು ಸೇರಿಸುತ್ತೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಕುಳಿತಿದ್ದ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯರನ್ನು ತಬ್ಬಿಕೊಳ್ಳಲು ಹೇಳಿದ ಕಾರಣ ಡಿಕೆಶಿ ತಬ್ಬಿಕೊಂಡಿದ್ದಾರೆ. ರಾಹುಲ್ ಗಾಂಧಿ ಹೇಳದೇ ತಬ್ಬಿಕೊಂಡಿದ್ದರೆ ಅವರಿಬ್ಬರು ಒಗ್ಗಟ್ಟಾಗಿದ್ದಾರೆ ಎಂದು ಜನರು ಭಾವಿಸುತ್ತಿದ್ದರು ಎಂದರು.
ಇದನ್ನೂ ಓದಿ : ಬಿಜೆಪಿ ಮತ್ತು ಆರ್ಎಸ್ಎಸ್ನವರು ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು : ಸಿದ್ದರಾಮಯ್ಯ