ರಾಯಚೂರು: ಹಾಸ್ಟೆಲ್ ಕಾರ್ಮಿಕರ ಮಾದರಿಯಲ್ಲಿ ಬಿಸಿಯೂಟ ಕಾರ್ಮಿಕರ ಸಂಬಳವನ್ನ 11,790 ರೂ.ಗೆ ಹೆಚ್ಚಿಸಬೇಕು. ಹಾಗೆಯೇ ಮೇಲಾಧಿಕಾರಿಗಳ ಕಿರುಕುಳ ತಪ್ಪಿಸಬೇಕೆಂದು ಕರ್ನಾಟಕ ರಾಜ್ಯ ಬಿಸಿಯೂಟ ನೌಕರರ ಸಂಘ (ಸಿಐಟಿಯು ಸಂಯೋಜಿತ) ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧ್ಯಕ್ಷ ಜಿ.ಅಮರೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಸಿಯೂಟ ಯೋಜನೆಯಡಿ ದುಡಿಯುತ್ತಿರುವವರ ಪೈಕಿ ಶೇ.80 ರಷ್ಟು ಮಹಿಳೆಯರಿದ್ದು, ಹಿಂದುಳಿದ ಮತ್ತು ಕೆಳಸ್ಥರದ ವರ್ಗದವರಾಗಿದ್ದು, ಅವರಿಗೆ ನೀಡುತ್ತಿರುವ ವೇತನ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದು ದೂರಿದರು.
ರಾಜ್ಯದ 15 ಜಿಲ್ಲೆಗಳಲ್ಲಿ ಸರ್ಕಾರೇತರ ಸಂಘ-ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇವು ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಬಿಸಿಯೂಟ ಯೋಜನೆಯ ಖಾಸಗೀಕರಣವನ್ನು ನಿಲ್ಲಿಸಬೇಕು, ನಿವೃತ್ತಿ ಹೊಂದಿದ ಕಾರ್ಮಿಕರಿಗೆ ಪಿಂಚಣಿ ನೀಡಬೇಕು. ರಜೆ, ಪಿಎಫ್ ಹಾಗೂ ಇತರೆ ಸಾಮಾಜಿಕ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.