ಲಿಂಗಸುಗೂರು (ರಾಯಚೂರು): ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕನಸಾವಿ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಅಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯದ ಚಿಂತನೆ ಮಾಡುವವರು ಯಾರು ಎಂಬುದು ಪ್ರಶ್ನೆಯಾಗಿದೆ.
ಆಮದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನಸಾವಿ ಗ್ರಾಮದ ಅಂಗನವಾಡಿ ಕೇಂದ್ರ (1) ಮೂರು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದು, ಕಟ್ಟಡ ಭಾಗಶಃ ಶಿಥಿಲಗೊಂಡಿದೆ. ಕಟ್ಟಡದ ಬಾಗಿಲು ಹಾಗೂ ಕಿಟಕಿ ಕಿತ್ತು ಹೋಗಿವೆ. ಮೇಲ್ಛಾವಣಿ ಸೋರುತ್ತಿದೆ. ಒಳ ಆವರಣದಲ್ಲಿ ಮುಳ್ಳುಕಂಟಿ, ಕಸಕಡ್ಡಿ ಬಿದ್ದು ಹಾವು, ಚೇಳಿನಂತಹ ಹುಳ ಉಪ್ಪಡಿಗಳು ವಾಸಿಸುತ್ತಿವೆ. ಇಲ್ಲಿ ಪಾಠ ಕಲಿಯುತ್ತಿರುವ 70ಕ್ಕೂ ಹೆಚ್ಚು ಮಕ್ಕಳ ಬಗ್ಗೆ ಪಾಲಕರು ಭೀತಿಗೊಳಗಾಗಿದ್ದಾರೆ.
ಈ ಬಗ್ಗೆ ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆ ತಾಲೂಕು ಅಧ್ಯಕ್ಷ ಶರಣಪ್ಪ ಗುಡಿಹಾಳ ಮಾತನಾಡಿ, ಕಟ್ಟಡದ ಸ್ಥಿತಿಗತಿ ಹಾಗೂ ಮಕ್ಕಳ ಭವಿಷ್ಯದ ಕುರಿತು ಗ್ರಾಮ ಪಂಚಾಯಿತಿಗೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಲಿಖಿತವಾಗಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.