ರಾಯಚೂರು: ನಗರದ ಪ್ರಸಿದ್ಧ ಹಮ್ ದರ್ದ್ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಇಂದು ನಡೆಯಿತು. ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕೆಲವರ ಚಿಂತನೆ ವ್ಯಕ್ತಿತ್ವ ಪ್ರಭಾವಕ್ಕೆ ಕಾಲಾವಧಿಯಿದ್ದು, ನಂತರ ಕೊನೆಗೊಳ್ಳುತ್ತದೆ. ಆದರೆ, ಸ್ವಾಮಿ ವಿವೇಕಾನಂದರ ವಿಷಯದಲ್ಲಿ ಅದು ವಿರುದ್ಧವಾಗಿದೆ. ಅಂದರೆ ಅವರು ಇಲ್ಲವಾಗಿ ನೂರು ವರ್ಷ ಕಳೆದರೂ ಅವರ ಚಿಂತನೆ ಮತ್ತು ವ್ಯಕ್ತಿತ್ವದ ಪ್ರಭಾವ ಕೊನೆಗೊಳ್ಳುವವರೆಗೂ ಹೆಚ್ಚಾಗುತ್ತಲೇ ಇರುತ್ತದೆ ಎಂದರು.
ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಮಂಗಳೂರಿನಿಂದ ಬಂದ ತಾರಾನಾಥರು ಶಿಕ್ಷಣ ಸಂಸ್ಥೆ ಆರಂಭಿಸಿ ಬಡ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ಭವಿಷ್ಯ ರೂಪಿಸಿದರು. ಒಬ್ಬರಿಂದ ಸಮಾಜ ಬದಲಾವಣೆ ಅಸಾಧ್ಯ ಎಂದು ಕೈಕಟ್ಟಿ ಕುಳಿತರೆ ಸಾಧನೆ ಅಸಾಧ್ಯ. ಬದಲಾವಣೆಗೆ ಕುತೂಹಲದಿಂದ ಶ್ರಮಿಸಿದರೆ ಯಶಸ್ಸು ಖಂಡಿತ ಸಾಧ್ಯ. ಶಾಲೆಯೆಂದರೆ ಕೇವಲ ಕೊಠಡಿಯಲ್ಲ. ಅದೊಂದು ಭವಿಷ್ಯ. ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ಚಿಂತನೆಗೆ ಒಳಪಡಿಸಬೇಕು. ಆಗ ಮಾತ್ರ ಯಶಸ್ವಿ ಶಿಕ್ಷಕರಾಗಲು ಸಾಧ್ಯ ಎಂದು ಹೇಳಿದರು.
ಮಂತ್ರಾಲಯದ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಪಾದಂಗಳವರು ಮಾತನಾಡಿ, ಹಿಂದಿನ ಕಾಲದ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ, ಜೀವನ ಪದ್ಧತಿಯ ಕುರಿತು ಕಲಿಸಲಾಗುತ್ತಿತ್ತು. ಆದರಿಂದು ಸ್ಮಾರ್ಟ್ ಕ್ಲಾಸ್ಗಳಲ್ಲಿ ನೀಡುವ ಮೂಲಕ ಹಣ ಗಳಿಸುವ ಉದ್ದೇಶ ಹೊಂದಿದ್ದಾರೆ. ನಗರದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸಿದರೆ ಸಾಕು, ಸಮಾಜದಲ್ಲಿ ಒಳ್ಳೆ ವ್ಯಕ್ತಿಯಾಗುತ್ತಾರೆ. ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ತಾರನಾಥರು ಸ್ಥಾಪಿಸಿದ ಸಂಸ್ಥೆ ಮತ್ತಷ್ಟು ಬೆಳೆದು ದ್ವಿಶತಮಾನೋತ್ಸವ ಆಚರಿಸಲಿ ಎಂದು ಹಾರೈಸಿದರು.