ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುಪೂರ್ಣಿಮೆ ಸಂಭ್ರಮ - ಸಡಗರ ಮನೆ ಮಾಡಿದೆ. ಎಂದಿನಂತೆ ರಾಯರ ಮೂಲ ಬೃಂದಾವನ ಪೂಜೆ ಪುನಸ್ಕಾರ ನಡೆದವು. ಬಳಿಕ ಗುರುಪೂರ್ಣಿಮೆ ನಿಮಿತ್ತವಾಗಿ ಮಠದ ಪೀಠಾಧಿಪತಿ ಶ್ರೀಸುಬುದೇಂದ್ರ ತೀರ್ಥರ ನೇತೃತ್ವದಲ್ಲಿ ವಿಶೇಷ, ಪೂಜೆ ಪುನಸ್ಕಾರ, ಹೋಮ-ಹವನ ಕಾರ್ಯಕ್ರಮಗಳು ನಡೆದವು.
ತುಂಗಭದ್ರಾ ನದಿ ತೀರದಲ್ಲಿರುವ ಮಠದ ತುಳಸಿ ವನದಲ್ಲಿ ಮೃತಿಕಾ ಸಂಗ್ರಾಹನಂ ಹೋಮ ನಡೆಸಲಾಯಿತು. ಪೂಜೆ ಬಳಿಕ ಮೃತಿಕಾ ಬಂಗಾರದ ಪಲ್ಲಕ್ಕಿಯಲ್ಲಿಟ್ಟು ತುಳಸಿ ವನದಿಂದ ಮಠದವರೆಗೆ ಮೆರವಣಿಗೆ ಮೂಲಕ ತರಲಾಯಿತು. ಮೃತಿಕಾಯನ್ನ ರಾಯರ ಮೂಲ ಬೃಂದಾವನಕ್ಕೆ ಅರ್ಪಿಸಲಾಯಿತು. ಇದಾದ ಬಳಿಕ ಪೀಠಾಧಿಪತಿಗಳು ವಿಶೇಷ ಪೂಜೆ ನೇರವೇರಿಸಿ ಭಕ್ತರಿಗೆ ಆಶೀರ್ವದಿಸಿದರು.
ಗುರುಪೂರ್ಣಿಮೆ ನಿಮಿತ್ತ ರಾಯರ ಮೂಲ ಬೃಂದಾವನ ವಿಶೇಷವಾಗಿ ಅಲಂಕರಿಸಲ್ಪಟ್ಟಿತ್ತು. ಅಲ್ಲದೇ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ ಭಕ್ತರು ದರ್ಶನ ಪಡೆದು ರಾಯರ ಆಶೀರ್ವಾದ ಪಡೆದು ಧನ್ಯರಾದರು.