ರಾಯಚೂರು : ಕುರಿ ಕಳ್ಳತನ ಮಾಡಿದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದ ವೀರೇಶ ಪೂಜಾರಿ, ಸೋಮಲಪುರ ಗ್ರಾಮದ ಮುದಿಯಪ್ಪ ದೇವರಮನಿ ಅಲಿಯಾಸ್ ಫಕೀರಪ್ಪ ಬಂಧಿತ ಆರೋಪಿಗಳಾಗಿದ್ದಾರೆ.
ಫೆ.16ರಂದು ಮಸ್ಕಿ ಪಟ್ಟಣದ ಹೊರವಲಯದಲ್ಲಿನ ಸಿಂಗಸನಹಳ್ಳ ನಿವಾಸಿ ಶಂಕ್ರಪ್ಪ ಎನ್ನುವವರು 27 ಕುರಿಗಳನ್ನು ಮೇಯಿಸಲು ಬಿಟ್ಟಿದ್ದರು. ಈ ವೇಳೆ ಅಪರಿಚಿತರು 49 ಸಾವಿರ ರೂಪಾಯಿ ಮೌಲ್ಯದ 17 ಕುರಿ ಹಾಗೂ ಇತರೆ ಕುರಿ ಮರಿಗಳನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಶಂಕ್ರಪ್ಪ ಮಸ್ಕಿ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ವಿಶೇಷ ತಂಡ ರಚಿಸಿ ತನಿಖೆ ನಡೆಸಿದ ಪೊಲೀಸರು, ಕುರಿ ಕಳ್ಳತನ ಮಾಡಿದ ಇಬ್ಬರು ಖದೀಮರನ್ನು ಬಂಧಿಸಿ, 17 ಕುರಿ ಹಾಗೂ ಮರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.