ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ದಡೇಸುಗೂರು ಹತ್ತಿರದ ಬೂದಿವಾಳ ಕ್ಯಾಂಪ್ ಬಳಿ ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಹಾಗೂ ನಿರ್ವಾಹಕ ಮೃತಪಟ್ಟಿದ್ದಾರೆ.
ಚಾಲಕ ಶಿವನಗೌಡ ಬಾಗಲಕೋಟೆ, ನಿರ್ವಾಹಕ ಚಂದ್ರು ಲಿಂಗಸೂಗೂರು ಮೃತ ದುರ್ದೈವಿಗಳು. ಬೆಂಗಳೂರಿನಿಂದ ರಾಯಚೂರಿಗೆ ಬರುವ ವೇಳೆ ಮಾರ್ಗ ಮಧ್ಯೆ 5ಗಂಟೆ ಸುಮಾರಿಗೆ ಈ ಭೀಕರ ರಸ್ತೆ ಅಪಘಾತವಾಗಿದೆ. ಅಪಘಾತದಲ್ಲಿ ಐದಾರು ಪ್ರಯಾಣಿಕರಿಗೂ ಗಾಯಗಳಾಗಿವೆ. ಅದರಲ್ಲಿ ಓರ್ವ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
![bus and lorry acciedent in raichur](https://etvbharatimages.akamaized.net/etvbharat/prod-images/3638633_sowww.jpg)
ಕೆಟ್ಟು ಹೋದ ಲಾರಿಯನ್ನ ರಸ್ತೆ ಬದಿ ನಿಲ್ಲಿಸಲಾಗಿತ್ತು. ಆದರೆ, ಹಿಂದಿನಿಂದ ಬಂದ ಬಸ್ ಲಾರಿಗೆ ಡಿಕ್ಕಿ ಹೊಡೆದಿದ್ದು, ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಷ್ಟೇ ಅಲ್ಲ, ಲಾರಿಯಲ್ಲಿದ್ದ ಕಬ್ಬಿಣದ ರಾಡುಗಳು ನಿರ್ವಾಹಕ ಮತ್ತು ಚಾಲಕನ ದೇಹದೊಳಗೆ ಹೊಕ್ಕ ಪರಿಣಾಮ ಅವರಿಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.