ರಾಯಚೂರು: ಭಾರಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಪ್ರವಾಹ ಭೀತಿ ಎದುರಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಇಂದು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
ವೈಮಾನಿಕ ಸಮೀಕ್ಷೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ವೈ, 2009ರಲ್ಲಿ 52 ಹಳ್ಳಿಗಳನ್ನು ಶಿಫ್ಟ್ ಮಾಡಲಾಗಿತ್ತು. ಇದರಿಂದ ಅನಾಹುತ ತಡೆಯಲಾಗಿತ್ತು. ಈಗ ಲಿಂಗಸೂಗೂರು ತಾಲೂಕಿನ ನಾರಾಯಣಪುರ ಜಲಾಶಯದ ನೀರಿನ ಒಳಹರಿವು 2.90 ಲಕ್ಷ ಕ್ಯೂಸೆಕ್ ಇದ್ದು, ಹೊರಹರಿವು 2.97 ಲಕ್ಷ ಕ್ಯೂಸೆಕ್ ಇದೆ. ಆಲಮಟ್ಟಿ ಡ್ಯಾಂನಿಂದ 3.25 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಲಿಂಗಸೂಗೂರಿನ 14 ಕುಟುಂಬಗಳು ಮುಳುಗಡೆ ಹಂತದಲ್ಲಿವೆ. ನದಿಪಾತ್ರದಲ್ಲಿನ 51 ಗ್ರಾಮಗಳಿಗೆ ಆಹಾರ ಧಾನ್ಯ ನೀಡಲಾಗಿದೆ. ಅವರಿಗೆ ವೈದ್ಯಕೀಯ ಸೇವೆ ನೀಡಲಾಗುವುದು. ಪ್ರವಾಹಕ್ಕೆ ಒಳಗಾಗುವ ಸ್ಥಳದಲ್ಲಿ ಈಜು ಪರಿಣಿತರಿಗೆ ಲೈಫ್ ಜಾಕೇಟ್ ನೀಡಲಾಗಿದೆ ಎಂದು ವಿವರಣೆ ನೀಡಿದರು.
ಇಂದು ಕೃಷ್ಣಾ ನದಿ ಪ್ರವಾಹದ ವರದಿಯನ್ನು ಮೋದಿಯವರಿಗೆ ನೀಡಲಾಗುವುದು. ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ನೆರೆ ಸಂತ್ರಸ್ತ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು. ಮನೆಗಳನ್ನು ನಿರ್ಮಿಸಲಾಗುವುದು. ಹತ್ತು ದಿನಗಳಲ್ಲಿ ರೈತರಿಗೆ 'ಕೃಷಿ ಸಮ್ಮಾನ್' ಯೋಜನೆ ಅಡಿಯಲ್ಲಿ ಮೊದಲ ಕಂತಿನ 2000 ರೂಪಾಯಿ ನೀಡಲಾಗುವುದು ಎಂದು ಭರವಸೆ ನೀಡಿದರು.