ರಾಯಚೂರು : ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯನೋ, ಅಷ್ಟೇ ನಿಶ್ಚಿತವಾಗಿ ರಾಜ್ಯದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸವನ್ನು ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವ ಮುನ್ನ ಸಿಂಧನೂರು ನಗರ ಹೊರವಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಜನ ಬೆಂಬಲದಿಂದ ಭಾರತೀಯ ಜನತಾಪಾರ್ಟಿ ಪ್ರಧಾನಿ ನರೇಂದ್ರ ಮೋದಿಯಂತಹ ಮಹಾನಾಯಕ ನೇತೃತ್ವದಲ್ಲಿ ಮತ್ತೊಮ್ಮೆ ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದು ಸೂರ್ಯಚಂದ್ರ ಇರುವುದು ಎಷ್ಟು ಸತ್ಯನೋ, ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದರು. ಎಲ್ಲ ಕಡೆ ನಮ್ಮ ಕಾರ್ಯಕರ್ತರು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿಯ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಿಎಸ್ವೈ ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಈಗಾಗಲೇ ಅಧಿಕಾರಕ್ಕೆ ಬಂದಿದ್ದೇವೆ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಇದು ತಿರುಕನ ಕನಸು. ಇವರಿಗೆ ಯಾವುದೇ ಜನ ಬೆಂಬಲ ಇಲ್ಲ. ರಾಜ್ಯದಲ್ಲಿ ರಾಜಕೀಯ ವಾತಾವರಣ ನಮ್ಮ ಪರವಾಗಿದೆ. ಇನ್ನು, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಮತ್ತಷ್ಟು ರಾಜ್ಯ ಪ್ರವಾಸ ಕೈಗೊಳ್ಳುವುದರಿಂದ, ಇದರಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಇನ್ನಷ್ಟು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಧ್ರುವನಾರಾಯಣ ನಿಧನಕ್ಕೆ ಬಿಎಸ್ವೈ ಸಂತಾಪ : ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ನಿಧನಕ್ಕೆ ಸಂತಾಪ ಸೂಚಿಸಿದ ಮಾಜಿ ಸಿಎಂ ಯಡಿಯೂರಪ್ಪ, ಅವರ ನಿಧನದ ಸುದ್ದಿ ಕೇಳಿ ನನ್ನ ಮನಸ್ಸಿಗೆ ಬಹಳ ನೋವು ಆಯಿತು. ಅವರು ಉತ್ತಮ, ಪ್ರಾಮಾಣಿಕ, ಕ್ರಿಯಾಶೀಲ ಮುಖಂಡರಾಗಿದ್ದರು. ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ಅವರ ಹೃದಯಾಘಾತದ ಸುದ್ದಿ ನನಗೆ ಆಘಾತ ತಂದಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಧ್ರುವನಾರಾಯಣ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಹೇಳಿದರು.
ಹಾಲಿ ಶಾಸಕರಿಗೆ ಟಿಕೆಟ್ ಕೈಬಿಡುವ ವಿಚಾರವಾಗಿ ಮಾತನಾಡಿದ ಬಿಎಸ್ವೈ, ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇವರಿಗೆ ಟಿಕೆಟ್ ಸಿಗುತ್ತದೆ. ಇವರಿಗೆ ಸಿಗುವುದಿಲ್ಲ ಎಂದು ನಾನು ಹೇಳಿಲ್ಲ. ಟಿಕೆಟ್ ನೀಡುವ ಬಗ್ಗೆ ಚುನಾವಣಾ ಸಮಿತಿಯಲ್ಲಿ ಕುಳಿತುಕೊಂಡು ಚರ್ಚೆ ಮಾಡುತ್ತೇವೆ. ಅಲ್ಲಿ ಏನು ತೀರ್ಮಾನವಾಗುತ್ತೋ ಅದೇ ಅಂತಿಮ. ನಾನು ಹೇಳಿದ್ದು ಅಂತಿಮ ಅಲ್ಲ. ಚುನಾವಣಾ ಸಮಿತಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಎಲ್ಲ ಮುಖಂಡರು ಇರುತ್ತಾರೆ. ಅಲ್ಲಿ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಮಂಡ್ಯಕ್ಕೆ ಆಗಮಿಸಲಿದ್ದಾರೆ. ಇಂದು ರಾತ್ರಿ ನಾನು ಮಂಡ್ಯಕ್ಕೆ ತೆರಳಬೇಕಾಗಿದೆ. ಎಲ್ಲೆಡೆ ವಿಜಯ ಸಂಕಲ್ಪ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬಿಎಸ್ವೈ ಹೇಳಿದರು. ಸಿಂಧನೂರು, ಮಸ್ಕಿ ಮತ್ತು ಲಿಂಗಸೂಗೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿದೆ.
ಇದನ್ನೂ ಓದಿ : ಮಾಡಾಳ್ ತಪ್ಪು ಮಾಡಿದ್ದಾರೆ, ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿದೆ: ಶೋಭಾ ಕರಂದ್ಲಾಜೆ