ರಾಯಚೂರು : ನಗರಸಭೆ ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಾರಂಭಿಸದೆ ಗುತ್ತಿಗೆದಾರರು ದಾಖಲೆಗಳಲ್ಲಿ ಮಾತ್ರ ಪ್ರಾರಂಭ ಎಂದು ನಮೂದಿಸಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್ ವೆಂಕಟೇಶ ಕುಮಾರ್ ಹೇಳಿದರು.
ನಗರಸಭೆ ಆಡಳಿತ ಅಧಿಕಾರಿಯೂ ಆಗಿರುವ ಅವರು ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ನಗರಸಭೆ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ, ಕೆಲ ಗುತ್ತಿಗೆದಾರರು ಕಾಮಗಾರಿಗಳನ್ನು ಪ್ರಾರಂಭ ಮಾಡದೆ ಅಂತರ್ಜಾಲದಲ್ಲಿ ಮಾತ್ರ ಕಾಮಗಾರಿ ಪ್ರಾರಂಭ ಎಂದು ತೋರಿಸಿರುವ ಕುರಿತು ನಮ್ಮ ಗಮನಕ್ಕೆ ಬಂದಿದೆ. ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ಅಧಿಕಾರಿಗಳು ಕುಡಿಯುವ ನೀರಿನ ಸರಬರಾಜು ಮಾಡುವಲ್ಲಿ ತೊಂದರೆ ಯಾಗದಹಾಗೆ ಕ್ರಮ ಕೈಗೊಳ್ಳಬೇಕು, ಕೊಳವೆ ಬಾವಿ ದುರಸ್ಥಿಗೆ ಸಂಬಂಧಿಸಿದಂತೆ ವಾರ್ಷಿಕ ಟೆಂಡರ್ ಕರೆಯಬೇಕು ಎಂದರು. ನಗರದಲ್ಲಿ ಅಗತ್ಯ ಇರುವ ಕಡೆ ರಸ್ತೆ ದುರಸ್ಥಿ ಕಾರ್ಯಗಳು ನಡೆಸಬೇಕು, ಹೊಸದಾಗಿ ರಸ್ತೆಗಳು ನಿರ್ಮಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು.
ನಗರಸಭೆ ಕಾಮಗಾರಿಗಳಿಗೆ ಜಿಲ್ಲಾಡಳಿತ ಅನುಮೋದನೆ ನೀಡುತ್ತಿಲ್ಲ ಎಂದು ನಗರಸಭೆ ಅಧಿಕಾರಿಗಳು ಉತ್ತರ ನೀಡುವುದು ಸಮಂಜಸವಲ್ಲ. ಅಗತ್ಯ ಕಾಮಗಾಗಳಿಗೆ ಒಂದು ಲಕ್ಷದವರೆಗೆ ಟೆಂಡರ್ ಕರೆಯುವ ಅಗತ್ಯವಿಲ್ಲ, ನಗರಸಭೆ ಕಾರ್ಯಗಳಿಗೆ
ಜಿಲ್ಲಾಡಳಿತ ಸಹಕಾರವಿದೆ.
ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ಸಭೆಯಲ್ಲಿ ಸೂಚಿಸಿದ ಸೂಚನೆ ಅನ್ವಯ ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ಶಿಕ್ಷೆ ಅನುಭವಿಸಲು ಸಿದ್ಧರಾಗಿ ಎಂದು ಎಚ್ಚರಿಸಿದರು.