ಕಲಬುರಗಿ/ರಾಯಚೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಎರಡು ದಿನದ ಮುಷ್ಕರ ಬೆಂಬಲಿಸಿ ಕಲಬುರಗಿ ಹಾಗೂ ರಾಯಚೂರಿನಲ್ಲಿ ಬ್ಯಾಂಕ್ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಕಲಬುರಗಿ ನಗರದ ಸೂಪರ್ ಮಾರ್ಕೆಟ್ನ ಕೆನರಾ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ ಬ್ಯಾಂಕ್ ನೌಕರರು ಹಾಗೂ ಸಿಬ್ಬಂದಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್ ವಿಲೀನಗೊಳಿಸುವುದು, ವೇತನ ಪರಿಷ್ಕರಣೆ, ಬ್ಯಾಂಕ್ ವಹಿವಾಟುಗಳನ್ನು ವಾರದಲ್ಲಿ ಐದು ದಿನಗಳಿಗೆ ಮಿತಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಈಡೇರಿಕೆ ಆಗ್ರಹಿಸಿ ರಾಯಚೂರು ಜಿಲ್ಲೆಯಲ್ಲಿನ ಎಲ್ಲಾ ಬ್ಯಾಂಕ್ಗಳನ್ನ ಬಂದ್ ಮಾಡಿ ಬ್ಯಾಂಕ್ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರದ ಹಲವು ಯೋಜನೆಗಳು ಬ್ಯಾಂಕ್ ಜತೆ ಜೋಡಣೆಯಾಗಿರುವುದರಿಂದ ನೌಕರರ ಮೇಲೆ ಕೆಲಸದ ಮೇಲೆ ಒತ್ತಡ ಹೆಚ್ಚಾಗಿದೆ. ಕೆಲಸಕ್ಕೆ ತಕ್ಕಂತೆ ವೇತನ ಪರಿಷ್ಕರಣೆ ಮಾಡಬೇಕು ಎಂದು ಪ್ರತಿಭಟನಾ ನಿರಂತರ ಬ್ಯಾಂಕ್ ನೌಕರರು ಒತ್ತಾಯಿಸಿದರು.