ರಾಯಚೂರು: ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಲ್ಲಿ ಟಿಕೆಟ್ಗಾಗಿ ತೀವ್ರ ಕಸರತ್ತು ನಡೆದಿತ್ತು. ಆದ್ರೆ ಆಶ್ಚರ್ಯಕರ ಬೆಳವಣಿಯಲ್ಲಿ ರಾಯಚೂರು ಮೂಲದ ಬಿಜೆಪಿ ಕಾರ್ಯಕರ್ತ ಹಾಗೂ ಆರ್‌ಎಸ್‌ಎಸ್ ಕಟ್ಟಾಳು ಎಂದೇ ಗುರುತಿಸಿಕೊಂಡಿರುವ ಅಶೋಕ್ ಗಸ್ತಿಗೆ ಟಿಕೆಟ್ ನೀಡಲಾಗಿದೆ.
ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗುರು ಮೂಲದವರ ಅಶೋಕ್ ಗಸ್ತಿ ಎಬಿವಿಪಿ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡು ಹೋರಾಟ ಆರಂಭಿಸಿದ್ರು. ಎಬಿವಿಪಿಯಲ್ಲಿ ಗುರುತಿಸಿಕೊಂಡ ಬಳಿಕ 1982ರಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ, ಶೈಕ್ಷಣಿಕ ಪ್ರಗತಿ ಹಾಗೂ ಸಾರ್ವಜನಿಕರ ಸಮಸ್ಯೆಗಳ ಸಂಬಂಧ ಹೋರಾಟ ನಡೆಸಿದ್ರು. 1983ರ ಅವಧಿಯಲ್ಲಿ ನಡೆದ ಸಾರ್ವಜನಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ರಾಜಕೀಯದಲ್ಲಿ ಗುರುತಿಸಿಕೊಂಡರು.
1990ರಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದರು. ವಿದ್ಯಾರ್ಥಿ ಸಂಘಟನೆ, ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ವಿದ್ಯಾಭ್ಯಾಸವನ್ನ ಮೊಟಕುಗೊಳಿಸಿ 1992ರಲ್ಲಿ ಕಾನೂನು ಪದವಿ ಪಡೆದುಕೊಂಡು 1992ರಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. ವೃತ್ತಿ ನಡುವೆ ಸಹ ಪಕ್ಷ ಸಂಘಟನೆ ಮುಂದುವರೆಸಿಕೊಂಡು 1993ರಿಂದ 1995ರವರೆಗೆ ರಾಯಚೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು.
1993ರಿಂದ 1999ರವರೆಗೆ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಳಿಕ 1996ರಲ್ಲಿ ಸವಿತಾ ಸಮಾಜದ ರಾಜ್ಯ ಉಪಾಧ್ಯಕ್ಷ ಜವಾಬ್ದಾರಿ ನಿರ್ವಹಣೆ ಮಾಡಿದರು. ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಸಮಯದಲ್ಲಿ 2001ರಲ್ಲಿ ರಾಯಚೂರು ನಗರಸಭೆಯ 21ನೇ ವಾರ್ಡ್ನಿಂದ ಸ್ಪರ್ಧೆ ಮಾಡಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು.
2010ರಲ್ಲಿ ರಾಯಚೂರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡರು. 2012ರಲ್ಲಿ ರಾಜ್ಯ ಸರ್ಕಾರದ ದಿ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದಾಗ ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ಕಲ್ಪಿಸಲಾಗಿತ್ತು.
2013ರಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪರಿಶಿಷ್ಟ ಹಿಂದುಳಿದ ವರ್ಗಗಳ ಮೋರ್ಚಾ ಕರ್ನಾಟಕ ಹಾಗೂ ಬಿಜೆಪಿಯ ಸಂಚಾಲಕರಾಗಿ(ಕಾನೂನು ಮತ್ತು ಶಾಸಕಾಂಗ ಪ್ರಕೋಷ್ಠ) ಕಾರ್ಯನಿರ್ವಹಿಸಿದರು. ರಾಜ್ಯಾದ್ಯಂತ ಓಡಾಡಿ ಬಿಜೆಪಿ ಸಂಘಟನೆ ಮಾಡುವ, ಯುವಕರಲ್ಲಿ ದೇಶದ ಪ್ರಮುಖ ವಿದ್ಯಾಮಾನಗಳ ಕುರಿತು ಅರಿವು ಮೂಡಿಸುವಲ್ಲಿ ತೊಡಗಿದ್ದರು.
ಅಲ್ಲದೆ ಆರ್ಎಸ್ಎಸ್ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಪಕ್ಷದ ಪ್ರಭಾರಿಯಾಗಿ ಸಂಘಟನೆಯಲ್ಲಿ ತೊಡಗಿದ್ದರು. ಅಲ್ಲದೇ ಕಳೆದ ವಿಧಾನಸಭೆ ಚುನಾವಣೆ ವೇಳೆ ರಾಯಚೂರು ನಗರದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಆಶ್ಚರ್ಯಕರ ಬೆಳವಣಿಗೆಯಲ್ಲಿ ರಾಜ್ಯಸಭೆಗೆ ಸ್ಪರ್ಧಿಸುವ ಸುವರ್ಣಾವಕಾಶ ಒಲಿದು ಬಂದಿದೆ. ಇದರಿಂದ ಕುಟುಂಬಸ್ಥರು ಸಹ ಸಂತಸಗೊಂಡಿದ್ದಾರೆ.