ರಾಯಚೂರು: ಅತಿಥಿ ಶಿಕ್ಷಕರಿಗೆ ಕೊರೊನಾ ಪ್ಯಾಕೇಜ್ ಘೋಷಣೆ, ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅತಿಥಿ ಶಿಕ್ಷಕರ ಹೋರಾಟ ಸಮಿತಿ, ಅಖಿಲ ಭಾರತ ಶಿಕ್ಷಣ ಉಳಿಸಿ ರಾಜ್ಯ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ಈ ಕೂಡಲೇ ಎಲ್ಲಾ ಅತಿಥಿ ಶಿಕ್ಷಕರಿಗೆ ಕೊರೊನಾ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು, ಮುಂಬರುವ ಎಲ್ಲಾ ನೇಮಕಾತಿಗಳಲ್ಲಿ ಅತಿಥಿ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡಿ, ಅತಿಥಿ ಶಿಕ್ಷಕರನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಖಾಯಂ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಕೆಲಸದಿಂದ ತೆಗೆದು ಹಾಕದಂತೆ ಉದ್ಯೋಗ ಭದ್ರತೆ ನೀಡುವ ಸರ್ಕಾರಿ ಸುತ್ತೋಲೆಯನ್ನು ಈ ಕೂಡಲೇ ಹೊರಡಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಚಾಲಕ ಭರತ್ ಕುಮಾರ್, ಮಲ್ಲೇಶ, ನಾಗರಾಜ, ದಶವಂತ, ಶರಣ ಬಸವ, ಗಂಗಾಧರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.