ರಾಯಚೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಜಾರಿಗೆ ಹಲವು ತೊಡಕುಗಳು ಎದುರಾಗಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವು ಅಕ್ಕಿ ವಿತರಣೆಯಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ರಾಜ್ಯದ ಬಡ ಜನತೆಯ ಹೊಟ್ಟೆ ತುಂಬಿಸಲು ಉಚಿತ ಅಕ್ಕಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದನ್ನು ತಡೆಯುತ್ತಿರುವ ಬಿಜೆಪಿಯವರಿಗೆ ನಾಚಿಕೆ ಆಗಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ನಗರದ ಹೊರವಲಯದ ಯರಮರಸ್ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಸಂದರ್ಭದಲ್ಲಿ ನಾವು ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದ್ದೆವು.
ಹೀಗಾಗಿ ಕೇಂದ್ರ ಸರ್ಕಾರದ ಎಫ್‌ಐಸಿಗೆ ಅಕ್ಕಿ ಪೂರೈಕೆ ಮಾಡುವಂತೆ ಪತ್ರ ಬರೆಯಲಾಗಿತ್ತು. ಅದಕ್ಕೆ ಎಫ್ಐಸಿ ಒಪ್ಪಿಗೆ ಸೂಚಿಸಿದ ನಂತರ ರಾಜ್ಯ ಸರ್ಕಾರ ಈ ಈ ಯೋಜನೆಯನ್ನು ಘೋಷಣೆ ಮಾಡಿತ್ತು. ಆದರೆ ಇದೀಗ ಬಡವರಿಗೆ ಅಕ್ಕಿ ಕೊಡುವ ಯೋಜನೆಯಲ್ಲಿ ರಾಜಕೀಯ ಮಾಡಿ, ಅಕ್ಕಿ ಪೂರೈಕೆಗೆ ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಬಿಜೆಪಿಯವರಿಗೆ ನಾಚಿಕೆಗೆ ಆಗಬೇಕು. ಇದರಿಂದಾಗಿ ಬಿಜೆಪಿ ನಾಯಕರ ಮುಖವಾಡ ಕಳಚಿ ಬಿದ್ದಿದೆ. ಕೇಂದ್ರ ಸರ್ಕಾರ ರಾಜಕೀಯ ಮಾಡಿ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಟೀಕಾಪ್ರಹಾರ ಮಾಡಿದರು.
ನುಡಿದಂತೆ ನಡೆಯುವುದು ಕಾಂಗ್ರೆಸ್ ಸರ್ಕಾರ ಭದ್ದತೆಯಾಗಿದೆ. ಈಗಾಗಲೇ ಮೊದಲೇ ಗ್ಯಾರಂಟಿ ಜಾರಿಯಲ್ಲಿದೆ. ಇನ್ನುಳಿದ ನಾಲ್ಕು ಗ್ಯಾರಂಟಿಗಳು ಶೀಘ್ರದಲ್ಲೇ ಜಾರಿಯಾಗುತ್ತದೆ. ಕೇಂದ್ರ ಸರ್ಕಾರವು ಎಫ್‌ಐಸಿಯಿಂದ ಈಗ ಅಕ್ಕಿ ಪೂರೈಕೆ ಮಾಡದೆ ಇರುವುದ್ದರಿಂದ ಪರ್ಯಾಯ ಮಾರ್ಗವನ್ನು ಸರ್ಕಾರ ಹುಡುಕುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಶಾಸಕರಾದ ಬಸವನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಬಸವನಗೌಡ ತುರುವಿಹಾಳ, ಶರಣಗೌಡ ಭಯ್ಯಾಪುರ ಸೇರಿದಂತೆ ಇತರರಿದ್ದರು.
ಮೋದಿ ನೋಡಿ ವೋಟ್ ಹಾಕಿಲ್ಲ ಎಂದು ದ್ವೇಷ ತೀರಿಸಿಕೊಳ್ತಿದ್ದೀರಾ?- ಸಚಿವ ಪ್ರಿಯಾಂಕ್ ಖರ್ಗೆ: ಕನ್ನಡಿಗರ ಮೇಲೆ ಯಾಕೆ ಇಷ್ಟೊಂದು ದ್ವೇಷ. ಮೋದಿ ನೋಡಿ ವೋಟ್ ಹಾಕಲಿಲ್ಲ ಎಂದು ದ್ವೇಷ ತೀರಿಸಿಕೊಳ್ತಿದ್ದೀರಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಅವರಿಗೆ ಕಾನೂನು ಸುವ್ಯವಸ್ಥೆ ಹಾಗೂ ಆಡಳಿತ ಮರೆತುಹೋಗಿದೆ. ಅವರ ಆಡಳಿತ ನೋಡಿಯೇ ಜನರು ಪ್ರತಿಪಕ್ಷದಲ್ಲಿ ಇಟ್ಟಿದ್ದಾರೆ. ಅಕ್ಕಿ ಖರೀದಿ ಮಾಡಲು ಆಗುತ್ತಿಲ್ಲ ಎಂದು ಟೀಕಿಸುತ್ತಿದ್ದಾರೆ. ಯಾವುದೇ ರಾಜ್ಯ ಸರ್ಕಾರ ಆದ್ರೂ ಕೇಂದ್ರದ ಮೊರೆ ಹೋಗುತ್ತದೆ. ಕೇಂದ್ರದಿಂದಲೇ ಅಕ್ಕಿ ಖರೀದಿ ಮಾಡಬೇಕು ಅಂತಿದೆ. ನಾವು ಪುಕ್ಸಟ್ಟೆ ಅಕ್ಕಿಯನ್ನು ಕೇಳಿದ್ವಾ.? ಎಂದು ಪ್ರಶ್ನಿಸಿದರು.
ನಾಳೆ ನಾವು ಮಾಡುವ ಪ್ರತಿಭಟನೆಗೆ ನೀವು ಬನ್ನಿ. ರಾಜ್ಯದಲ್ಲಿ 25 ಎಂಪಿಗಳು ಇದ್ದೀರಾ. ಈಗಲಾದ್ರೂ ಬನ್ನಿ. ಧಮ್ಮು ತಾಕತ್ತು ಅಂತೀರಲ್ಲ ಅದನ್ನು ಈಗಲಾದರೂ ಬಂದು ತೋರಿಸಿ ಎಂದು ಹೇಳಿದರು.
ವಿದ್ಯುತ್ ದರ ಹೆಚ್ಚಳ ಸಂಬಂಧ ಮಾತನಾಡಿ, ವಿದ್ಯುತ್ ದರ ಹೆಚ್ಚಳ ಮಾಡಿದ್ದು ಹಿಂದಿನ ಸರ್ಕಾರ. ಬೆಲೆ ಏರಿಕೆಗೆ ಒಪ್ಪಿಗೆ ಕೊಟ್ಟಿದ್ದು ಯಾರು. ಬಿಜೆಪಿಯವರಿಗೆ ಆಡಳಿತ ಗೊತ್ತಿಲ್ಲ ಟೀಕಿಸಿದರು.
ಅಕ್ಕಿ ಕೊಡುವ ಪುಣ್ಯ ಕಾರ್ಯ ಮಾಡುತ್ತೇವೆ- ಸಚಿವ ಹೆಚ್.ಕೆ.ಪಾಟೀಲ್ : ಯಾರೇನೇ ಹೇಳಿದರೂ ಅಕ್ಕಿ ಕೊಡುವ ಪುಣ್ಯದ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ವಿತರಣೆಯಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ. ರಾಜ್ಯದ ಬಡ ಜನರಿಗೆ ಅಕ್ಕಿ ವಿತರಣೆ ಮಾಡುತ್ತೇವೆ ಎಂದು ಹೇಳಿದರು.
ಸಿಎಂ ಆಡಳಿತದಲ್ಲಿ ಡಿಕೆಶಿಯವರು ಹಸ್ತಕ್ಷೇಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು, ಎಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಈ ವಿಚಾರ ನಿಮಗೇನಾದರೂ ಹೇಳಿದರಾ?. ಇವೆಲ್ಲ ಸುಳ್ಳು. ನಮ್ಮ ಸರಕಾರಕ್ಕೆ ಕೆಟ್ಟ ಹೆಸರು ತರಲು ಜನರ ಮನಸ್ಸನ್ನ ಬೇರೆ ಕಡೆ ತಿರಗಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಜೊತೆಗೆ ಎಲ್ಲರೂ ವಿಶ್ವಾಸದಿಂದ ಇದ್ದಾರೆ. ಎಲ್ಲರೂ ಸರಕಾರದ ಕೆಲಸವನ್ನು ಸಿಎಂ ಮುಂದೆ ಮಾತನಾಡ್ತೀವಿ. ಹೈಕಮಾಂಡ್ ಏನೂ ಹಸ್ತಕ್ಷೇಪ ಮಾಡ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ : Anna Bhagya scheme: ಅನ್ನಭಾಗ್ಯ ಯೋಜನೆಗೆ ಟೆಂಡರ್ ಮೂಲಕ ಅಕ್ಕಿ ಪಡೆಯಲು ಕ್ರಮ- ಸಿಎಂ ಸಿದ್ದರಾಮಯ್ಯ