ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನ ಸಿಐಡಿ ತಂಡ ಇಂದು ಮುಂದುವರೆಸಿದೆ. ಕಳೆದ ಮೂರು ದಿನಗಳ ಹಿಂದೆ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಇಂದು ಸಂಜೆ ಮತ್ತೆ ಸಿಐಡಿ ಎಸ್ಪಿ ಶರಣಪ್ಪ ನೇತೃತ್ವದಲ್ಲಿ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಪೋಷಕರಿಂದ ಮಾಹಿತಿ ಪಡೆದುಕೊಂಡಿದೆ.
ನಗರದ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿನಿ ಮನೆಯಿಂದ ತೆರಳಿದಾಗಿನಿಂದ ಇಲ್ಲಿಯವರೆಗೆ ನಡೆದ ಘಟನನೆಗಳು ಮತ್ತು ಈ ಹಿಂದೆ ನಡೆದ ಘಟನೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ರು.
ಇನ್ನು ಮೃತ ವಿದ್ಯಾರ್ಥಿನಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಪರಿಶೀಲಿಸಿ ಬಳಿಕ ಸಿಐಡಿ ತಂಡ ಬೆಳಗ್ಗೆ ವಿದ್ಯಾರ್ಥಿನಿ ಓದುತ್ತಿದ್ದ ಎಂಜಿನಿಯರಿಂಗ್ ಕಾಲೇಜಿಗೆ ತೆರಳಿ ಕಾಲೇಜು ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಂಡರು. ಕಾಲೇಜಿನ ಸಿಸಿಟಿವಿ ಕ್ಯಾಮರಾಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕಾಲೇಜಿನ ಪರಿಶೀಲನೆ ನಂತರ ಸಿಐಡಿ ತಂಡ ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಲು ಮುಂದಾಗಿತ್ತು. ಆದರೆ ಕುಟುಂಬದ ಸದಸ್ಯರು ಇಂದು ಮೃತರ ಆತ್ಮಕ್ಕೆ ಶಾಂತಿ ಕೋರುವ ದಿನದ ಕಾರ್ಯಕ್ರಮದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುತ್ತಿರುವ ಕಾರಣ ಪಾಲಕರು ಸಂಜೆ ಬರುವಂತೆ ಕೋರಿಕೊಂಡ ಕಾರಣ ತಂಡ ಸಂಜೆ ಮನೆಗೆ ತೆರಳಿದೆ.
ಸುಮಾರು ಎರಡು ಗಂಟೆಗಳ ಕಾಲ ಪಾಲಕರಿಂದ ಮಾಹಿತಿ ಪಡೆದುಕೊಂಡ ತಂಡ, ಮನೆ ಸುತ್ತಮುತ್ತಲ ಪ್ರದೇಶವನ್ನು ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಸಿಐಡಿ ಡಿವೈಎಸ್‌ಪಿ ರವಿಶಂಕರ, ಸಿಪಿಐ ದಿಲೀಪ್‌ಕುಮಾರ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಇದ್ದರು.