ರಾಯಚೂರು: ಬಿಸಿಲೂರು ರಾಯಚೂರು ಜಿಲ್ಲೆಗೆ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ನಾಳೆ (ಮಾ.26) ಆಗಮಿಸಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಅಡಿಗಲ್ಲು ನೆರವೇರಿಸಲಿದ್ದಾರೆ ಎಂದು ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಬ್ಬೂರು ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಅಗತ್ಯ ಸಿದ್ಧತೆಗಳು ಭರದಿಂದ ಸಾಗಿವೆ. ಮೊಟ್ಟ ಮೊದಲ ಬಾರಿಗೆ ರಾಯಚೂರು ಜಿಲ್ಲೆಗೆ ಅಮಿತ್ ಶಾ ಆಗಮಿಸುತ್ತಿದ್ದು, ಒಟ್ಟು 4283 ಕೋಟಿ ರೂಪಾಯಿಯ ವೆಚ್ಚದ 220 ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಭೂಮಿ ಪೂಜೆ ನೇರವೇರಿಸುವರು ಎಂದು ಮಾಹಿತಿ ನೀಡಿದರು.
ಸಾವಿರಾರು ಕೋಟಿ ಅನುದಾನ: ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ತರುವ ಮೂಲಕ ಮೂಲಭೂತ ಸೌಕರ್ಯಗಳು ಹಾಗೂ ನೀರಾವರಿ ಯೋಜನೆಗಳು, ಶೈಕ್ಷಣಿಕ ಯೋಜನೆಗಳು ಸೇರಿದಂತೆ ನಾನಾ ಯೋಜನಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಗೆ 2978 ಕೋಟಿ ರೂಪಾಯಿ, ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ 26 ಕಾಮಗಾರಿಗಳಿಗೆ 234.5 ಕೋಟಿ, ಲೋಕೋಪಯೋಗಿ ಇಲಾಖೆಯ 571 ಕೋಟಿ ರೂ ವೆಚ್ಚದ 105 ಕಾಮಗಾರಿಗಳಿಗೆ ಕೇಂದ್ರ ಸಚಿವ ಅಮಿತ ಶಾ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 75.81 ಕೋಟಿ ರೂ ವೆಚ್ಚದ ಮೂರು ಕಾಮಗಾರಿಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ 19 ಕಾಮಗಾರಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ 1 ಕಾಮಗಾರಿಗೆ ನಾಳೆ ಚಾಲನೆ ಸಿಗಲಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ 46.26 ಕೋಟಿಯ ಐದು ಕಾಮಗಾರಿಗಳು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದ 29.02 ಕೋಟಿಯ 26 ಕಾಮಗಾರಿ, ಕರ್ನಾಟಕ ಆರೋಗ್ಯ ವ್ಯವಸ್ಥೆಯ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆ(ವೈದ್ಯಕೀಯ ಶಿಕ್ಷಣ ಸಚಿವಾಲಯ) 48 ಕೋಟಿಯ 2 ಕಾಮಗಾರಿ, ಆರ್ ಐಟಿಇಎಸ್ ಇಲಾಖೆಯ 8.8 ಕೋಟಿ ರೂ ವೆಚ್ಚದ 4 ಕಾಮಗಾರಿಗಳಿಗೆ ಶಾ ಅವರು ಚಾಲನೆ ಕೊಡಲಿದ್ದಾರೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 22.65 ಕೋಟಿಯ 8 ಕಾಮಗಾರಿ, ಕ್ಯಾಶುಟೆಕ್ (ನಿರ್ಮಿತಿ ಕೇಂದ್ರ) 11 ಕಾಮಗಾರಿ, ಕರ್ನಾಟಕ ರಾಜ್ಯ ಪೊಲೀಸ್ ಮೂಲಸೌಕರ್ಯ ಮತ್ತು ವಸತಿ ನಿಯಮಿತದ 2 ಕಾಮಗಾರಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಯಮಿತದ 3.72 ಕೋಟಿ ರೂ ವೆಚ್ಚದ 2 ಕಾಮಗಾರಿಗಳಿಗೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಯಮ ನಿಯಮಿತದ ಒಂದು ಕಾಮಗಾರಿ, ಕರ್ನಾಟಕ ಹೌಸಿಂಗ್ ಬೋರ್ಡ್ ಮತ್ತು ಸರ್ಕಾರಿ ಮಾದರಿ ಪದವಿ ಕಾಲೇಜಿನ 12 ಕೋಟಿ ವಚ್ಚದ ಕಾಮಗಾರಿ ಸೇರಿ ಒಟ್ಟು 4283 ಕೋಟಿ ರೂ ವೆಚ್ಚದ 220 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ದೇವದುರ್ಗ ಕ್ಷೇತ್ರದಲ್ಲೇ 3100 ಕೋಟಿ ಮೊಚ್ಚ ಕಾಮಗಾರಿ ನಡೆಯಲಿದೆ ಎಂದರ.
ಕಾರ್ಯಕ್ರಮದಲ್ಲಿ ಅಮಿತ್ ಶಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ವಿ.ಸೋಮಣ್ಣ, ಶಂಕರ್ ಪಾಟೀಲ್ ಮುನೇನಕೊಪ್ಪ ಸೇರಿದಂತೆ ಅನೇಕ ನಾಯಕರು, ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬೃಹತ್ ವೇದಿಕೆ ಸಿದ್ಧ: ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಿದ್ಧಗೊಂಡಿದ್ದು, 1 ಲಕ್ಷ ಮೂರು ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 2 ಲಕ್ಷ ಜನರು ಬರುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಬಂದವರಿಗೆ ಲಡ್ಡು ಸಮೇತ ಭೋಜನೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂಓದಿ:ಪಂಚಮಸಾಲಿ ಸಮುದಾಯದ ಹೋರಾಟ ಅಂತ್ಯ: ಭಾವುಕರಾದ ಸ್ವಾಮೀಜಿ